ವಿವಾದಾತ್ಮಕ ವಕ್ಫ್ (ತಿದ್ದುಪಡಿ) ಮಸೂದೆ 2024, ಏಪ್ರಿಲ್ 02, 2025ರ ಬುಧವಾರ ಲೋಕಸಭೆಯಲ್ಲಿ ಚರ್ಚೆ ಮತ್ತು ಅಂಗೀಕಾರಕ್ಕಾಗಿ ಮಂಡಿಸಲ್ಪಡಲಿದ್ದು, ನರೇಂದ್ರ ಮೋದಿ ಸರ್ಕಾರವು ಮಸೂದೆಯ ಮೇಲಿನ ಚರ್ಚೆಗೆ ಎಂಟು ಗಂಟೆಗಳನ್ನು ನಿಗದಿಪಡಿಸಿದೆ ಮತ್ತು ವಕ್ಫ್ (ತಿದ್ದುಪಡಿ) ಮಸೂದೆ 2024 ಬಹುಮತದಿಂದಾಗಿ ಅಂಗೀಕಾರಗೊಳ್ಳಲಿದೆ ಎನ್ನುವ ವಿಶ್ವಾಸದಲ್ಲಿದೆ.
ಏನಿದು ವಕ್ಫ್ ಮಸೂದೆ?
ವಕ್ಫ್ ಎಂದರೆ ಇಸ್ಲಾಮಿಕ್ ಕಾನೂನಿನಡಿಯಲ್ಲಿ ಧಾರ್ಮಿಕ ಅಥವಾ ದತ್ತಿ ಉದ್ದೇಶಗಳಿಗಾಗಿ ಮಾತ್ರ ಮೀಸಲಾಗಿರುವ ಆಸ್ತಿಗಳು ಮತ್ತು ಆಸ್ತಿಯ ಯಾವುದೇ ಇತರ ಬಳಕೆ ಅಥವಾ ಮಾರಾಟವನ್ನು ನಿಷೇಧಿಸಲಾಗಿದೆ. ವರದಿಯ ಪ್ರಕಾರ, ಸಶಸ್ತ್ರ ಪಡೆಗಳು ಮತ್ತು ಭಾರತೀಯ ರೈಲ್ವೆಗಳ ನಂತರ ವಕ್ಫ್ ಮಂಡಳಿಯು ಭಾರತದಲ್ಲಿ ಅತಿ ಹೆಚ್ಚು ಭೂಮಾಲೀಕತ್ವ ಹೊಂದಿದೆ.
ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ಬಿಡುಗಡೆಯಾದ ಸರ್ಕಾರಿ ಹೇಳಿಕೆಯ ಪ್ರಕಾರ, ವಕ್ಫ್ ಮಂಡಳಿಗಳು ಪ್ರಸ್ತುತ ಭಾರತದಾದ್ಯಂತ 9.4 ಲಕ್ಷ ಎಕರೆಗಳಷ್ಟು ವಿಸ್ತೀರ್ಣ ಹೊಂದಿರುವ 8.7 ಲಕ್ಷ ಆಸ್ತಿಗಳನ್ನು ನಿಯಂತ್ರಿಸುತ್ತಿದ್ದು, ಇವುಗಳ ಅಂದಾಜು ಮೌಲ್ಯ 1.2 ಲಕ್ಷ ಕೋಟಿ ರೂ. ಆಗಿದೆ. ಭಾರತವು ವಿಶ್ವದಲ್ಲೇ ಅತಿ ಹೆಚ್ಚು ವಕ್ಫ್ ಹಿಡುವಳಿ ಹೊಂದಿದೆ.
ಏನಿದು ವಕ್ಫ್ (ತಿದ್ದುಪಡಿ) ಮಸೂದೆ, 2024
1995 ರ ವಕ್ಫ್ ಕಾಯ್ದೆಯನ್ನು ತಿದ್ದುಪಡಿ ಮಾಡುವ ಮಸೂದೆ ಇದಾಗಿದೆ. ವಕ್ಫ್ ಆಸ್ತಿಗಳ ನಿರ್ವಹಣೆ, ಪಾರದರ್ಶಕತೆ ಮತ್ತು ದುರುಪಯೋಗ ತಡೆಗಟ್ಟುವಿಕೆಗಾಗಿ ನಿಯಮಗಳನ್ನು ಬಿಗಿಗೊಳಿಸುವುದು ಇದರ ಉದ್ದೇಶವಾಗಿದೆ.
ವಕ್ಫ್ ಮಸೂದೆ, 2024 ತಿದ್ದುಪಡಿಯ ಸರಕಾರದ ಉದ್ದೇಶವೇನು ?
ಸರ್ಕಾರದ ಪ್ರಕಾರ, ಮಸೂದೆಯ ಹಿಂದಿನ ಕಾಯ್ದೆಯ ನ್ಯೂನತೆಗಳನ್ನು ನಿವಾರಿಸಲು ಮತ್ತು ಕಾಯ್ದೆಯನ್ನು ಮರುನಾಮಕರಣ ಮಾಡುವುದು ಈ ತಿದ್ದುಪಡಿಯ ಉದ್ದೇಶವಾಗಿದೆ. ಇದು ವಕ್ಫ್ ಮಂಡಳಿಯಲ್ಲಿ ಮುಸ್ಲಿಮೇತರರು ಮತ್ತು ಮಹಿಳಾ ಸದಸ್ಯರನ್ನು ಸೇರಿಸುವುದು, ಕಲೆಕ್ಟರ್‌ಗೆ ಆಸ್ತಿಯನ್ನು ಸಮೀಕ್ಷೆ ಮಾಡುವ ಹಕ್ಕನ್ನು ನೀಡುವುದು ಮತ್ತು ವಕ್ಫ್ ನ್ಯಾಯಮಂಡಳಿಯ ನಿರ್ಧಾರಗಳನ್ನು ಹೈಕೋರ್ಟ್‌ನಲ್ಲಿ ಪ್ರಶ್ನಿಸುವ ನಿಬಂಧನೆಯನ್ನು ಕೂಡಾ ಒಳಗೊಂಡಿದೆ. ವಕ್ಫ್‌ನ ವ್ಯಾಖ್ಯಾನಗಳನ್ನು ನವೀಕರಿಸುವುದು, ನೋಂದಣಿ ಪ್ರಕ್ರಿಯೆಯನ್ನು ಸುಧಾರಿಸುವುದು ಮತ್ತು ವಕ್ಫ್ ದಾಖಲೆಗಳನ್ನು ನಿರ್ವಹಿಸುವಲ್ಲಿ ತಂತ್ರಜ್ಞಾನದ ಪಾತ್ರವನ್ನು ಹೆಚ್ಚಿಸುವಂತಹ ಬದಲಾವಣೆಗಳನ್ನು ಪರಿಚಯಿಸುವ ಮೂಲಕ ವಕ್ಫ್ ಮಂಡಳಿಗಳ ದಕ್ಷತೆಯನ್ನು ಹೆಚ್ಚಿಸುವ ಗುರಿಯನ್ನು ಹೊಂದಿದೆ ಎಂದು ತಿಳಿಸಿದೆ.
ವಕ್ಫ್ ಮಸೂದೆ, 2024 ತಿದ್ದುಪಡಿಗೆ ವಿರೋಧವಿದೆಯೇ ?
ವಿರೋಧ ಪಕ್ಷಗಳು ಮತ್ತು ವಿವಿಧ ಮುಸ್ಲಿಂ ಸಂಘಟನೆಗಳು, ವಕ್ಫ್ ಮಸೂದೆ, 2024 ತೀವ್ರ ವಿರೋಧ ವ್ಯಕ್ತಪಡಿಸುತ್ತಲೇ ಬಂದಿದೆ. ವಿರೋಧ ಪಕ್ಷಗಳು ಮಸೂದೆಯ ವಿರುದ್ಧ ಪ್ರತಿರೋಧವನ್ನು ಪ್ರದರ್ಶಿಸಲು ಒಗ್ಗಟ್ಟಾಗಿವೆ ಮತ್ತು ಅವರು ಈ ತಿದ್ದುಪಡಿ "ಅಸಂವಿಧಾನಿಕ" ಎಂದು ಕರೆಯುತ್ತಾರೆ. ಈ ಬದಲಾವಣೆಗಳು ಮುಸ್ಲಿಮರ ಭೂಮಿಯನ್ನು ಕಸಿದುಕೊಳ್ಳುವ ಉದ್ದೇಶವನ್ನು ಹೊಂದಿವೆ ಎಂದು ಆರೋಪಿಸುತ್ತಿದ್ದಾರೆ.
ಕರ್ನಾಟಕದಲ್ಲಿ ಏನಿದು ವಕ್ಫ್ ಗೊಂದಲ ?
ಕರ್ನಾಟಕದಾದ್ಯಂತ 4,108 ವಕ್ಫ್ ಪ್ರಕರಣಗಳು ದಾಖಲಾಗಿದೆ ಎಂದು ಸರಕಾರದ ಮಂತ್ರಿ ತಿಳಿಸಿದ್ದಾರೆ. ರಾಜ್ಯದ ಹಲವಾರು ಜಿಲ್ಲೆಗಳಲ್ಲಿ ವಕ್ಫ್ ಮಂಡಳಿಯು ಭೂ ಸ್ವಾದೀನ ಮಾಡಲು ಅರ್ಜಿ ಹಾಕಿದ ಹಲವಾರು ಪ್ರಕರಣಗಳು ನಡೆದಿದ್ದವು. ಅದರಲ್ಲೂ ರೈತರ ಜಮೀನು ಸ್ವಾದೀನ ಪ್ರಕರಣ ಬಹಳಷ್ಟು ಸದ್ದು ಮಾಡಿತ್ತು.