ಭಾರತ–ಅಮೆರಿಕ ವ್ಯಾಪಾರ ಒಪ್ಪಂದ: ಪ್ರಧಾನಿ ಮೋದಿಗೆ ಸಂಸತ್ತಿನಲ್ಲಿ ಭವ್ಯ ಸನ್ಮಾನ

  • 03 Feb 2026 12:33:56 PM

ಭಾರತ ಮತ್ತು ಅಮೆರಿಕ ನಡುವಿನ ವ್ಯಾಪಾರ ಒಪ್ಪಂದ ಕುರಿತು ಕಳೆದ ಕೆಲ ತಿಂಗಳುಗಳಿಂದ ತೀವ್ರ ಚರ್ಚೆಗಳು ನಡೆಯುತ್ತಿದ್ದು, ಇದೀಗ ಮಹತ್ವದ ಮುನ್ನಡೆ ಕಂಡುಬಂದಿದೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾರತ ರಫ್ತುಗಳ ಮೇಲೆ ಹೇರಿದ್ದ 25 ರಿಂದ 50 ಶೇಕಡಾ ವರೆಗೆ ಇದ್ದ ಸುಂಕವನ್ನು 18 ಶೇಕಡಕ್ಕೆ ಇಳಿಸುವುದಾಗಿ ಫೆಬ್ರವರಿ 2, 2026ರಂದು ಘೋಷಿಸಿದ್ದಾರೆ.

 

ಈ ನಿರ್ಧಾರವನ್ನು ಭಾರತಕ್ಕೆ ದೊರೆತ ದೊಡ್ಡ ರಾಜತಾಂತ್ರಿಕ ಜಯವೆಂದು ಬಿಜೆಪಿ ಸರ್ಕಾರ ಬಣ್ಣಿಸಿದ್ದು, ಇಂದು ಸಂಸತ್ತಿನಲ್ಲಿ ಎನ್‌ಡಿಎ ಸಂಸದರು ಪ್ರಧಾನಿ ನರೇಂದ್ರ ಮೋದಿಯವರಿಗೆ ಪುಷ್ಪಮಾಲೆ ಹಾಕಿ ಅಭಿನಂದನೆ ಸಲ್ಲಿಸಿದರು. ಈ ಕಾರ್ಯಕ್ರಮದಲ್ಲಿ ಬಿಜೆಪಿ ಮತ್ತು ಎನ್‌ಡಿಎಯ ಎಲ್ಲಾ ಪ್ರಮುಖ ನಾಯಕರು ಭಾಗವಹಿಸಿದ್ದರು. ಸಂದರ್ಭದಲ್ಲಿ 'ಭಾರತ್ ಮಾತಾ ಕೀ ಜೈ' ಮತ್ತು 'ವಂದೇ ಮಾತರಂ' ಘೋಷಣೆ ಕೂಡ ಮೊಳಗಿತು.

 

ಟ್ರಂಪ್ ಹೇಳಿಕೆಯ ಪ್ರಕಾರ, ಭಾರತ ಮುಂದಿನ ದಿನಗಳಲ್ಲಿ ರಷ್ಯಾದ ತೈಲ ಖರೀದಿಯನ್ನು ಕಡಿಮೆ ಮಾಡಿ ಅಮೆರಿಕ ಹಾಗೂ ವೆನೆಜುವೆಲಾ ದೇಶಗಳಿಂದ ತೈಲ ಆಮದು ಮಾಡುವ ಸಾಧ್ಯತೆ ಇದೆ ಎಂದು ತಿಳಿಸಿದ್ದಾರೆ. ಇದಲ್ಲದೆ, ಭಾರತವೂ ಅಮೆರಿಕದ ರಫ್ತುಗಳ ಮೇಲೆ ಇದ್ದ ಕೆಲವು ಸುಂಕಗಳನ್ನು ಶೂನ್ಯಕ್ಕೆ ತಂದಿರುವುದಾಗಿ ವರದಿಯಾಗಿದೆ.

 

ಸಾಮಾಜಿಕ ಜಾಲತಾಣಗಳಲ್ಲಿ, “ಪ್ರಧಾನಿ ಮೋದಿಗೆ ನೀಡಿದ ಈ ಸನ್ಮಾನ ಪ್ರತಿಯೊಬ್ಬ ಭಾರತೀಯನಿಗೂ ಹೆಮ್ಮೆಯ ಕ್ಷಣ. ಇದು ಕೇವಲ ಒಪ್ಪಂದವಲ್ಲ, ಭಾರತದ ರಾಜತಾಂತ್ರಿಕ ವಿಜಯ” ಎಂದು ಹಲವರು ಪ್ರತಿಕ್ರಿಯಿಸಿದ್ದಾರೆ. ಆದರೆ ಇನ್ನೊಂದು ವರ್ಗದವರು, “ಇಲ್ಲಿ ಆಚರಿಸಲು ಏನೂ ಇಲ್ಲ, ಭಾರತ ಈಗಾಗಲೇ ನಷ್ಟ ಅನುಭವಿಸಿದೆ” ಎಂದು ಟೀಕೆ ಮಾಡಿದ್ದಾರೆ.

 

ಈ ನಡುವೆ ವಿರೋಧ ಪಕ್ಷ ಕಾಂಗ್ರೆಸ್, ಭಾರತ–ಅಮೆರಿಕ ವ್ಯಾಪಾರ ಒಪ್ಪಂದದ ಸಂಪೂರ್ಣ ವಿವರಗಳನ್ನು ಸಂಸತ್ತಿನಲ್ಲಿ ಮಂಡಿಸಿ ವಿಸ್ತೃತ ಚರ್ಚೆ ನಡೆಸಬೇಕು ಎಂದು ಒತ್ತಾಯಿಸಿದೆ.