ಉಪ್ಪಿನಂಗಡಿ: ನಗರದ ಬಸ್ ನಿಲ್ದಾಣದಲ್ಲಿ ಸೋಮವಾರ ಮಧ್ಯಾಹ್ನ ಸಂಭವಿಸಿದ ಘಟನೆಯೊಂದರಲ್ಲಿ ಬಸ್ ಚಾಲಕರ ಸಮಯೋಚಿತ ನಿರ್ಧಾರದಿಂದ ಸಂಭವಿಸಬಹುದಾಗಿದ್ದ ಭಾರೀ ಅನಾಹುತ ತಪ್ಪಿದ ಘಟನೆ ನಡೆದಿದೆ.
ಮಂಗಳೂರಿನಿಂದ ಉಪ್ಪಿನಂಗಡಿಗೆ ಬಂದಿದ್ದ ಖಾಸಗಿ ಬಸ್‌ನಲ್ಲಿದ್ದ ಪ್ರಯಾಣಿಕರು ಇಳಿದ ಬಳಿಕ, ವಾಹನವನ್ನು ಬದಿಗೆ ನಿಲ್ಲಿಸಲು ಚಾಲಕ ಹಿಂದಕ್ಕೆ ಚಲಾಯಿಸುತ್ತಿದ್ದರು. ಇದೇ ವೇಳೆ ಬಸ್ ಏಕಾಏಕಿ ನಿಯಂತ್ರಣ ತಪ್ಪಿ ಮುಂದಕ್ಕೆ ಚಲಿಸಲು ಆರಂಭಿಸಿದೆ. ತಕ್ಷಣ ಬ್ರೇಕ್ ಹಾಕಿದರೂ ಬಸ್ ನಿಲ್ಲದಿರುವುದನ್ನು ಗಮನಿಸಿದ ಚಾಲಕ, ಅಪಾಯದ ಸಾಧ್ಯತೆಯನ್ನು ಮನಗಂಡು ರಸ್ತೆ ಮಧ್ಯದಲ್ಲಿದ್ದ ವೃತ್ತಕ್ಕೆ ಬಸ್ ಅನ್ನು ಡಿಕ್ಕಿ ಹೊಡೆಸಿ ನಿಲ್ಲಿಸುವ ಮೂಲಕ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದಿದ್ದಾರೆ.
ಬಸ್ ವೇಗವಾಗಿ ಮುಂದಕ್ಕೆ ಸಾಗುತ್ತಿದ್ದ ಸಂದರ್ಭದಲ್ಲಿ ಎದುರುಗಡೆಯಿಂದ ವಾಹನಗಳು ಬಂದಿದ್ದರೆ ಅಥವಾ ವೃತ್ತದ ಸಮೀಪ ಪಾದಚಾರಿಗಳು ಹಾಗೂ ದ್ವಿಚಕ್ರ ವಾಹನ ಸವಾರರು ಸಂಚರಿಸುತ್ತಿದ್ದರೆ ಗಂಭೀರ ಅವಘಡ ಸಂಭವಿಸುವ ಸಾಧ್ಯತೆ ಇತ್ತು. ಆದರೆ ಘಟನೆಯ ಸಮಯದಲ್ಲಿ ಬಸ್ ಸಾಗಿದ ಮಾರ್ಗದಲ್ಲಿ ಯಾರೂ ಇಲ್ಲದಿದ್ದ ಕಾರಣ ಯಾವುದೇ ಜೀವಹಾನಿ ಅಥವಾ ಗಾಯಗಳ ವರದಿಯಾಗಿಲ್ಲ.
ಚಾಲಕರ ಚಾಕಚಕ್ಯತೆ ಮತ್ತು ಕ್ಷಿಪ್ರ ಕ್ರಮದಿಂದ ದೊಡ್ಡ ದುರಂತವೊಂದು ತಪ್ಪಿರುವುದಕ್ಕೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಘಟನೆ ಕೆಲಕಾಲ ಆತಂಕ ಸೃಷ್ಟಿಸಿದರೂ, ಯಾವುದೇ ಅಪಾಯ ಸಂಭವಿಸದಿರುವುದು ಸ್ಥಳೀಯರಿಗೆ ಸಮಾಧಾನ ತಂದಿದೆ.





