ಮಧ್ಯಪ್ರದೇಶದ ನೀಮಚ್ ಜಿಲ್ಲೆಯಲ್ಲಿ ನಡೆದ ಹೃದಯವಿದ್ರಾವಕ ಘಟನೆಯಲ್ಲಿ ಅಂಗನವಾಡಿ ಅಡುಗೆ ಸಿಬ್ಬಂದಿ ಕಾಂಚನ್ ಬಾಯಿ ಮೇಘ್ವಾಲ್ ಅವರು ಸುಮಾರು 20 ಮಕ್ಕಳ ಪ್ರಾಣ ಉಳಿಸುವ ವೇಳೆ ತಮ್ಮ ಜೀವವನ್ನೇ ತ್ಯಾಗ ಮಾಡಿದ್ದಾರೆ.
ಅಂಗನವಾಡಿ ಕೇಂದ್ರದಲ್ಲಿ ಮಕ್ಕಳು ಇದ್ದ ಸಮಯದಲ್ಲಿ ಏಕಾಏಕಿ ಜೇನುನೊಣಗಳ ದಾಳಿ ಸಂಭವಿಸಿದೆ. ಗಾಬರಿಗೊಂಡ ಮಕ್ಕಳನ್ನು ರಕ್ಷಿಸಲು ಕಾಂಚನ್ ಬಾಯಿ ಅವರು ಮಕ್ಕಳ ಮೇಲೆ ಮ್ಯಾಟ್ಸ್ ಮತ್ತು ಟಾರ್ಪಾಲಿನ್ ಗಳನ್ನು ಮುಚ್ಚಿ ಸುರಕ್ಷಿತ ಸ್ಥಳಕ್ಕೆ ಕರೆದೊಯ್ದರು. ಈ ವೇಳೆ ಅವರು ಹಲವು ಬಾರಿ ಜೇನುನೊಣಗಳ ಕಡಿತಕ್ಕೆ ಒಳಗಾದರು.
ಎಲ್ಲ ಮಕ್ಕಳನ್ನೂ ಸುರಕ್ಷಿತವಾಗಿ ಸ್ಥಳಾಂತರಿಸಿದ ನಂತರ ಕಾಂಚನ್ ಬಾಯಿ ಅವರ ಆರೋಗ್ಯ ಗಂಭೀರವಾಗಿ ಹದಗೆಟ್ಟಿತು. ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಅವರು ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕಾಂಚನ್ ಬಾಯಿ ಅವರ ಧೈರ್ಯ ಮತ್ತು ಮಾನವೀಯತೆ ದೇಶಾದ್ಯಂತ ಪ್ರಶಂಸೆಗೆ ಪಾತ್ರವಾಗಿದ್ದು, ಮಕ್ಕಳ ಜೀವ ಉಳಿಸಿದ ಅವರ ತ್ಯಾಗವನ್ನು ಜನತೆ ನಮನಿಸುತ್ತಿದ್ದಾರೆ.





