ಬೆಂಗಳೂರು ಅಂತರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಸಿನಿಮಾ ಪ್ರದರ್ಶನಕ್ಕೆ ಲಂಚ ಕೇಳಲಾಗಿದೆ ಎಂದು ಬಿಜೆಪಿ ಆರೋಪಿಸಿದೆ. ಕರ್ನಾಟಕ ಕಾಂಗ್ರೆಸ್ ಸರ್ಕಾರದ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿ ಬಿಜೆಪಿ ತನ್ನ ಅಧಿಕೃತ ಎಕ್ಸ್ (X) ಖಾತೆಯಲ್ಲಿ ಪೋಸ್ಟ್ ಪ್ರಕಟಿಸಿದೆ.
ಪೋಸ್ಟ್‌ನಲ್ಲಿ, ಫಿಲ್ಮ್ ಚೇಂಬರ್‌ನಿಂದ ವಿಧಾನಸೌಧವರೆಗೆ ಕಮಿಷನ್ ದಂಧೆ ವ್ಯಾಪಿಸಿದೆ ಎಂದು ಬಿಜೆಪಿ ಆರೋಪಿಸಿದೆ. ಚಲನಚಿತ್ರೋತ್ಸವದಲ್ಲಿ ಸಿನಿಮಾ ಪ್ರದರ್ಶನವಾಗಬೇಕಾದರೆ ಅಕಾಡೆಮಿ ಅಧ್ಯಕ್ಷ ಸಾಧು ಕೋಕಿಲ ಅವರಿಗೆ ₹5 ಲಕ್ಷ ಲಂಚ ನೀಡಬೇಕಂತೆ ಎಂಬ ಆರೋಪವೂ ಮಾಡಲಾಗಿದೆ. ಇದು ಕರ್ನಾಟಕದ ಇತಿಹಾಸದಲ್ಲೇ ಮೊದಲ ಬಾರಿಗೆ ಇಂತಹ ಪ್ರಕರಣ ನಡೆದಿದೆ ಎಂದು ಬಿಜೆಪಿ ಹೇಳಿದೆ.
ಇದಲ್ಲದೆ, ಈ ಹಣ ಸಂಗ್ರಹದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಪಾತ್ರ ಏನು ಎಂದು ಬಿಜೆಪಿ ಪ್ರಶ್ನಿಸಿದೆ. ಈ ಆರೋಪಗಳ ಕುರಿತು ಸರ್ಕಾರ ಅಥವಾ ಸಾಧು ಕೋಕಿಲ ಅವರ ಪ್ರತಿಕ್ರಿಯೆ ಈವರೆಗೂ ಲಭ್ಯವಾಗಿಲ್ಲ.
ಸಾಧು ಕೋಕಿಲ ವಿರುದ್ಧ ಏನಿದು ಆರೋಪ?
ಕರ್ನಾಟಕ ಚಲಚಿತ್ರ ಅಕಾಡೆಮಿಯ ಅಧ್ಯಕ್ಷರಾಗಿರುವ ಸಾಧು ಕೋಕಿಲ ಚಿತ್ರ ಪ್ರದರ್ಶನಕ್ಕೆ 3 ರಿಂದ 5 ಲಕ್ಷದವರಿಗೆ ಲಂಚ ಕೇಳಿದ್ದಾರೆ ಎಂದು ಪರಮ್ ಗುಬ್ಬಿ ಎಂಬವರು ಆರೋಪಿಸಿ ತಮ್ಮ ಫೇಸ್ ಬುಕ್ ಪೇಜ್ ನಲ್ಲಿ ನೇರವಾಗಿ ಆರೋಪ ಮಾಡಿದ್ದಾರೆ. ಚಲಚಿತ್ರೋತ್ಸವದಲ್ಲಿ ತಮ್ಮ ಚಿತ್ರ ಪ್ರದರ್ಶನಕ್ಕೆ ಅವಕಾಶ ಸಿಗದಿರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದ ಅವರು, ಸಾಧು ಕೋಕಿಲ ಮತ್ತು ಮುರಳಿ ಅವರಿಗೆ 3-5 ಲಕ್ಷ ಲಂಚ ನೀಡಿದ್ದರೆ ನಮ್ಮ ಚಿತ್ರವೂ ಆಯ್ಕೆಯಾಗುತ್ತಿತ್ತು ಎಂದು ಬರೆದು ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಿದ್ದು, ಈ ಮೂಲಕ ಗಂಭೀರ ಆರೋಪ ಹೊರಿಸಿದ್ದಾರೆ. ಈ ಪೋಸ್ಟ್ ಈಗ ವ್ಯಾಪಕ ಚರ್ಚೆಗೆ ಕಾರಣವಾಗಿದೆ.





