ಬೆಂಗಳೂರು: ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ ವತಿಯಿಂದ 2013–14 ರಿಂದ 2018–19ರ ಅವಧಿಯಲ್ಲಿ ನೀಡಲಾಗಿದ್ದ ಸಾಲಗಳಿಗೆ ಒಂದು ಬಾರಿ ಪರಿಹಾರ ಯೋಜನೆ (ಒಟಿಎಸ್) ಅಡಿ ಬಡ್ಡಿ ಮನ್ನಾ ಮಾಡಿ ವಸೂಲಾತಿ ನಡೆಸಲು ರಾಜ್ಯ ಸರ್ಕಾರ ಅನುಮೋದನೆ ನೀಡಿದೆ.
ಈ ಕುರಿತು ಮಾಹಿತಿ ನೀಡಿದ ಸಚಿವ ಎಚ್.ಕೆ. ಪಾಟೀಲ್, ಐದು ವರ್ಷಗಳಲ್ಲಿ ಒಟ್ಟು 981 ಕೋಟಿ ರೂ. ಸಾಲ ನೀಡಲಾಗಿದ್ದು, ಇದರಲ್ಲಿ ಸುಮಾರು 714 ಕೋಟಿ ರೂ. ವಸೂಲಿಗೆ ಬಾಕಿ ಉಳಿದಿದೆ ಎಂದರು.
ಇದೇ ವೇಳೆ, ರಾಜ್ಯದ ವಿವಿಧ ಭಾಗಗಳಲ್ಲಿ ಒತ್ತುವರಿ ಆಗಿರುವ 326 ದೇವಸ್ಥಾನಗಳ ಜಾಗ ತೆರವುಗೊಳಿಸಿ ದಾಖಲೆಗಳನ್ನು ಡಿಜಿಟಲೀಕರಣಗೊಳಿಸಲು 15 ಕೋಟಿ ರೂ. ವೆಚ್ಚದ ಯೋಜನೆಗೂ ಸಂಪುಟ ಒಪ್ಪಿಗೆ ನೀಡಿದೆ.
ಸಾರಥಿ ಯೋಜನೆಯಡಿ ಜಿಬಿಎ ವ್ಯಾಪ್ತಿಯಲ್ಲಿ ಇ-ವೆಂಡಿಂಗ್ ಆಟೋ ಖರೀದಿಗೆ 19.18 ಕೋಟಿ ರೂ. ಅನುದಾನ ನೀಡಲು ತೀರ್ಮಾನಿಸಲಾಗಿದ್ದು, ಕಲಬುರಗಿ ಸೇರಿದಂತೆ ಆರು ಜಿಲ್ಲೆಗಳಲ್ಲಿ 100 ಕೋಟಿ ರೂ. ವೆಚ್ಚದಲ್ಲಿ ಅರಣ್ಯೀಕರಣ ಕಾರ್ಯಾಚರಣೆ ನಡೆಸಲು ನಿರ್ಧರಿಸಲಾಗಿದೆ.
ಮೈಕ್ರೋ ಫೈನಾನ್ಸ್ ಕಿರುಕುಳದಿಂದ ಮೃತಪಟ್ಟವರ ಕುಟುಂಬಗಳಿಗೆ ಪರಿಹಾರ ನೀಡುವ ವಿಷಯದಲ್ಲಿ ಸದಸ್ಯರ ಮಧ್ಯೆ ಒಮ್ಮತ ಬರದ ಹಿನ್ನೆಲೆಯಲ್ಲಿ ಚರ್ಚೆಯನ್ನು ಮುಂದೂಡಲಾಗಿದೆ ಎಂದು ಮೂಲಗಳು ತಿಳಿಸಿವೆ.





