ಕಾಸರಗೋಡು: ಸಾಮಾಜಿಕ ಜಾಲತಾಣಗಳಲ್ಲಿ ‘ಅಡೂರ್ ಚಿನ್ನು ಪಾಪು’ ಎಂದೇ ಜನಪ್ರಿಯರಾಗಿದ್ದ ಯುವ ಪ್ರಭಾವಿ ಮಹಿಳೆ ರೇಷ್ಮಾ (24) ಕಾಸರಗೋಡು ಹೊರವಲಯದ ಉಲಿಯತ್ತಡ್ಕದ ಅಪಾರ್ಟ್‌ಮೆಂಟ್‌ನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.
ಸೋಮವಾರ ಮಧ್ಯಾಹ್ನ ಅವರು ತಮ್ಮ ನಿವಾಸದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಆಸ್ಪತ್ರೆಗೆ ಸಾಗಿಸಿದರೂ ಮೃತಪಟ್ಟಿದ್ದಾರೆ ಎಂದು ವೈದ್ಯರು ಘೋಷಿಸಿದರು.
ಸ್ಥಳೀಯ ಕಾಸರಗೋಡು ಉಪಭಾಷೆಯಲ್ಲಿ ವಿಡಿಯೋಗಳ ಮೂಲಕ ಜನಮನ ಗೆದ್ದಿದ್ದ ರೇಷ್ಮಾಗೆ ಎರಡು ಲಕ್ಷಕ್ಕೂ ಅಧಿಕ ಅನುಯಾಯಿಗಳಿದ್ದರು. ವೈಯಕ್ತಿಕ ಜೀವನದಲ್ಲಿ ವಿಚ್ಛೇದನ ಸೇರಿದಂತೆ ಕೆಲವು ಸಮಸ್ಯೆಗಳನ್ನು ಎದುರಿಸುತ್ತಿದ್ದ ಅವರು ಬಾಡಿಗೆ ಅಪಾರ್ಟ್‌ಮೆಂಟ್‌ನಲ್ಲಿ ವಾಸಿಸುತ್ತಿದ್ದರು ಎನ್ನಲಾಗಿದೆ.
ಘಟನೆಯ ನಿಖರ ಕಾರಣ ಇನ್ನೂ ಸ್ಪಷ್ಟವಾಗಿಲ್ಲ. ಪ್ರಕರಣ ದಾಖಲಿಸಿಕೊಂಡಿರುವ ಕಾಸರಗೋಡು ಪೊಲೀಸರು ಅವರ ಮೊಬೈಲ್ ಫೋನ್ ಪರಿಶೀಲನೆ ಸೇರಿ ಸಮಗ್ರ ತನಿಖೆ ನಡೆಸುತ್ತಿದ್ದಾರೆ.





