23 February 2026 | Join group

ಪೆರ್ನೆ ಕಡಂಬು ಹತ್ತಿರ ಮಂಗಳೂರು–ಉಪ್ಪಿನಂಗಡಿ ರಸ್ತೆಯಲ್ಲಿ ಕಾರು-ಕೇಟರಿಂಗ್ ವಾಹನ ಡಿಕ್ಕಿ: ಮಹಿಳೆ ಸೇರಿ ಮೂವರು ಗಾಯ

  • 22 Feb 2026 05:58:38 PM

ಉಪ್ಪಿನಂಗಡಿ: ಮಂಗಳೂರು ಕಡೆಯಿಂದ ಉಪ್ಪಿನಂಗಡಿ ಕಡೆ ಪ್ರಯಾಣಿಸುತ್ತಿದ್ದ ಮಾರುತಿ ಸ್ವಿಫ್ಟ್ ಕಾರೊಂದು, ಕೇಟರಿಂಗ್ ಸೇವೆಯ ಡೆಲಿವರಿ ಮುಗಿಸಿ ಮರಳುತ್ತಿದ್ದ ಕ್ಯಾರಿ ವಾಹನಕ್ಕೆ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಚಾಲಕರು ಮತ್ತು ಮಹಿಳೆಯೊಬ್ಬರು ಗಾಯಗೊಂಡಿದ್ದಾರೆ.

 

ಡಿಕ್ಕಿಯ ಪರಿಣಾಮ ಕೇಟರಿಂಗ್ ಕ್ಯಾರಿ ವಾಹನವು ಮೂರು ಪಲ್ಟಿ ಹೊಡೆದು ಭಾರೀ ಹಾನಿಗೊಳಗಾಗಿದೆ. ಸ್ವಿಫ್ಟ್ ಕಾರು ಕೂಡ ಜಖಂಗೊಂಡಿದೆ. ಕ್ಯಾರಿ ವಾಹನದ ಚಾಲಕನಿಗೆ ಹೆಚ್ಚಿನ ಸ್ವರೂಪದ ಗಾಯಗಳಾಗಿದ್ದು, ಅವರನ್ನು ಉಪ್ಪಿನಂಗಡಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

 

ಸ್ವಿಫ್ಟ್ ಕಾರು ಮುಂದಕ್ಕೆ ಚಲಿಸುತ್ತಿದ್ದ ಕ್ಯಾರಿ ವಾಹನಕ್ಕೆ ಹಿಂದಿನಿಂದ ಡಿಕ್ಕಿ ಹೊಡೆದಿದ್ದು, ಹೊಡೆತದ ರಭಸಕ್ಕೆ ಕ್ಯಾರಿ ವಾಹನ ಮೂರೂ ಪಲ್ಟಿಯಾಗಿರುತ್ತದೆ. ಮೂಲಗಳ ಪ್ರಕಾರ ಸ್ವಿಫ್ಟ್ ಕಾರಿನ ಚಾಲಕ ನಿದ್ರಾವಸ್ಥೆಯಲ್ಲಿ ಹೊಡೆದಿರಬಹುದು ಎನ್ನಲಾಗಿದೆ.

 

ಕೇಟರಿಂಗ್ ವಾಹನದ ಚಾಲಕ ವಿಗ್ನೇಶ್ ಕೇಟರಿಂಗ್ ಮಾಲಕ ದಿನೇಶ್ ಎಂದು ತಿಳಿದು ಬಂದಿದ್ದು, ಅವರು ಗಡಿಯಾರ ಸಮೀಪದ ಹಾಲ್‌ನಲ್ಲಿ ನಡೆದ ಮದುವೆ ಸಮಾರಂಭಕ್ಕೆ ಭೋಜನ ವ್ಯವಸ್ಥೆ ಮಾಡಿ ಸರಪಾಡಿಗೆ ಮರಳುತ್ತಿದ್ದರು ಎನ್ನಲಾಗಿದೆ. ಗಾಯಗೊಂಡ ವಿಗ್ನೇಶ್ ಅವರಿಗೆ ಉಪ್ಪಿನಂಗಡಿಯ ಸೂರ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

 

ಕೇಟರಿಂಗ್ ವಾಹನದಲ್ಲಿ ಮಹಿಳೆಯೊಬ್ಬರು ಕೂಡ ಇದ್ದಿದ್ದು, ಅವರಿಗೂ ಕೂಡ ಗಾಯಗಳಾಗಿದೆ. ಘಟನೆ ಕುರಿತು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಮುಂದಿನ ತನಿಖೆ ಬಳಿಕ ಹೆಚ್ಚಿನ ಮಾಹಿತಿ ಲಭ್ಯವಾಗಲಿದೆ.