ಅಂಧಶ್ರದ್ಧೆ ಮತ್ತು ಜ್ಯೋತಿಷ್ಯದ ಮಾತುಗಳನ್ನು ಅಂಧವಾಗಿ ನಂಬುವುದು ಎಷ್ಟು ಅಪಾಯಕಾರಿ ಎಂಬುವುದಕ್ಕೆ ಈ ಘಟನೆಯೇ ಸಾಕ್ಷಿ. ಯಾವುದೇ ಆರೋಪ ಅಥವಾ ಅನುಮಾನಗಳನ್ನು ತಕ್ಷಣ ಕಾನೂನುಬದ್ಧ ಮಾರ್ಗದಲ್ಲಿ ಪರಿಶೀಲಿಸದೆ ಮಾಡಿದ ಅಪರಾಧ ಹೇಗೆ ಪೇಚಿಗೆ ಸಿಲುಕಿಸುತ್ತದೆ ಎಂಬುದಕ್ಕೆ ಉದಾಹರಣೆ ಈ ಪ್ರಕರಣ.
ಒಬ್ಬ ಜ್ಯೋತಿಷ್ಯದ ಮಾತು ನಂಬಿದ ಮಹಿಳೆಯೊಬ್ಬಳು ತನ್ನ ತಾಯಿಯನ್ನು ಕೊಂದಿರುವ ದುರಂತ ಘಟನೆ ತುಮಕೂರು ಜಿಲ್ಲೆಯಲ್ಲಿ ವರದಿಯಾಗಿದೆ. 33 ವರ್ಷದ ತುಮಕೂರಿನ ಸುಚಿತ್ರಾ ಎಂಬ ಮಹಿಳೆ ಈ ಕೃತ್ಯ ಎಸಗಿದ್ದಾಳೆ.
ಸುಚಿತ್ರಾ ತನ್ನ ಗಂಡನ ಮನೆಯಲ್ಲಿ ವಾಸಿಸುತ್ತಿದ್ದು, 18 ತಿಂಗಳ ಹಿಂದೆ ಆಕೆಯ ತಂದೆ ನಿಧನರಾಗಿದ್ದರು. ತಂದೆಯ ಸಾವಿನ ಕಾರಣ ತಿಳಿದುಕೊಳ್ಳಲು ಆಕೆ ಜ್ಯೋತಿಷ್ಯರೊಬ್ಬರನ್ನು ಭೇಟಿ ಮಾಡಿದ್ದಳು. ಆ ಸಂದರ್ಭದಲ್ಲಿ ಜ್ಯೋತಿಷ್ಯರು, “ನಿನ್ನ ತಂದೆಗೆ ನಿನ್ನ ತಾಯಿ ಮಾಟಮಂತ್ರ ಮಾಡಿದ್ದರಿಂದಲೇ ಅವರು ಮೃತಪಟ್ಟಿದ್ದಾರೆ” ಎಂದು ಹೇಳಿದ್ದಾನೆ ಎನ್ನಲಾಗಿದೆ.
ಈ ಮಾತು ಕೇಳಿ ಸಿಟ್ಟುಗೊಂಡ ಸುಚಿತ್ರಾ, ತನ್ನ ತಾಯಿಯನ್ನು ಕೊಲೆ ಮಾಡಲು ಸಂಚು ರೂಪಿಸಿದ್ದಳು. ಬಳಿಕ ತಾಯಿಯ ಮನೆಗೆ ತೆರಳಿ, ಆಕೆ ಮಲಗಿದ್ದ ವೇಳೆ ತಲೆದಿಂಬಿನಿಂದ ಉಸಿರುಗಟ್ಟಿಸಿ ಹತ್ಯೆ ಮಾಡಿದ್ದಾಳೆ. ಕೊಲೆಯಾದ ದುರ್ದೈವಿ 55 ವರ್ಷದ ಪುಷ್ಪಾವತಿ ಎಂದು ಗುರುತಿಸಲಾಗಿದೆ.
ತಾಯಿಯ ಹತ್ಯೆಯ ನಂತರ ಅಂತ್ಯಸಂಸ್ಕಾರವನ್ನು ತುರ್ತುವಾಗಿ ನಡೆಸಲು ಸುಚಿತ್ರಾ ತೋರಿದ ಆತುರದಿಂದ ಅಕ್ಕಪಕ್ಕದವರಿಗೆ ಅನುಮಾನ ಉಂಟಾಯಿತು. ಅವರು ಪೊಲೀಸರಿಗೆ ಮಾಹಿತಿ ನೀಡಿದರು.
ಪ್ರಾಥಮಿಕ ತನಿಖೆಯಲ್ಲಿ ಸುಚಿತ್ರಾ ತನ್ನ ತಾಯಿಯನ್ನು ತಾನೇ ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾಳೆ. ತುಮಕೂರಿನ ಕ್ಯಾತ್ಸಂದ್ರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಯನ್ನು ಬಂಧಿಸಿ ಪೊಲೀಸರು ಮುಂದಿನ ತನಿಖೆ ನಡೆಸುತ್ತಿದ್ದಾರೆ.





