ಅಬುಧಾಬಿ: ಪ್ರಸ್ತುತ ಪಶ್ಚಿಮ ಏಷ್ಯಾದ ಉದ್ವಿಗ್ನ ಪರಿಸ್ಥಿತಿಯ ನಡುವೆ ಯುಎಇ ಅಧ್ಯಕ್ಷರು ಶತ್ರು ರಾಷ್ಟ್ರಗಳಿಗೆ ಕಠಿಣ ಸಂದೇಶ ರವಾನಿಸಿದ್ದಾರೆ. ಯುಎಇ ಸುಂದರ, ಆಕರ್ಷಕ ಮತ್ತು ಮಾದರಿ ರಾಷ್ಟ್ರವಾದರೂ ಅದನ್ನು ದುರ್ಬಲ ಎಂದು ಭಾವಿಸಬಾರದು ಎಂದು ಅವರು ಎಚ್ಚರಿಕೆ ನೀಡಿದ್ದಾರೆ.
ಯುನೈಟೆಡ್ ಅರಬ್ ಎಮಿರೇಟ್ಸ್ ನ ಅಧ್ಯಕ್ಷ 'ಶೇಖ್ ಮೊಹಮ್ಮದ್ ಬಿನ್ ಜಾಯೆದ್ ಅಲ್ ನಹ್ಯಾನ್' (Sheikh Mohamed bin Zayed Al Nahyan) ಇರಾನ್ ಡ್ರೋನ್ ದಾಳಿಯಲ್ಲಿ ಗಾಯಗೊಂಡವರ ಅರೋಗ್ಯ ವಿಚಾರಣೆ ನಡೆಸಲು ಆಸ್ಪತ್ರೆಗೆ ತೆರಳಿ ಮಾತನಾಡಿದರು. “ಯುಎಇ ಆಕರ್ಷಕ ದೇಶ, ಯುಎಇ ಸುಂದರ ದೇಶ, ಯುಎಇ ಒಂದು ಮಾದರಿ ರಾಷ್ಟ್ರ. ಆದರೆ ಅದರ ಹೊರಗಿನ ರೂಪವನ್ನು ನೋಡಿ ಯಾರೂ ತಪ್ಪು ಕಲ್ಪನೆ ಮಾಡಬಾರದು. ಯುಎಇಗೆ ದಪ್ಪ ಚರ್ಮವಿದೆ ಮತ್ತು ಕಠಿಣ ಶಕ್ತಿ ಇದೆ,” ಎಂದು ಅವರು ಹೇಳಿದ್ದಾರೆ.
ಇನ್ನೂ ಮುಂದೆ ಮಾತನಾಡಿದ ಅವರು, “ನಾವು ಯಾರಿಗೂ ಸುಲಭ ಬೇಟೆಯಲ್ಲ. ನಮ್ಮ ದೇಶ, ನಮ್ಮ ಜನರು ಹಾಗೂ ನಮ್ಮ ದೇಶದಲ್ಲಿ ವಾಸಿಸುವ ನಿವಾಸಿಗಳ ಸುರಕ್ಷತೆಗಾಗಿ ನಮ್ಮ ಕರ್ತವ್ಯವನ್ನು ನಾವು ನಿರ್ವಹಿಸುತ್ತೇವೆ. ಇಲ್ಲಿ ವಾಸಿಸುವವರು ಕೂಡ ನಮ್ಮ ಕುಟುಂಬದ ಭಾಗವೇ,” ಎಂದು ಸ್ಪಷ್ಟಪಡಿಸಿದರು.
ಅಲ್ಲದೆ, “ದೇವರು ಯುಎಇಯನ್ನು, ಅದರ ಜನರನ್ನು ಹಾಗೂ ಇಲ್ಲಿ ಗೌರವ ಮತ್ತು ಭದ್ರತೆಯೊಂದಿಗೆ ಬದುಕುತ್ತಿರುವ ಎಲ್ಲರನ್ನು ರಕ್ಷಿಸಲಿ. ನಾವು ಹಿಂದಿನಿಗಿಂತ ಇನ್ನಷ್ಟು ಬಲಿಷ್ಠವಾಗಿ ಹೊರಹೊಮ್ಮುತ್ತೇವೆ ಎಂದು ನಾನು ಎಲ್ಲರಿಗೂ ಭರವಸೆ ನೀಡುತ್ತೇನೆ,” ಎಂದು ಅವರು ಹೇಳಿದ್ದಾರೆ.





