ಉಡುಪಿ: ಡೆಬಿಟ್ ಕಾರ್ಡ್ ಮಾಹಿತಿಯನ್ನು ದುರುಪಯೋಗಪಡಿಸಿಕೊಂಡು ವ್ಯಕ್ತಿಯೊಬ್ಬರ ಬ್ಯಾಂಕ್ ಖಾತೆಯಿಂದ 2.12 ಲಕ್ಷ ರೂಪಾಯಿ ಹಣವನ್ನು ವಂಚಕರು ವರ್ಗಾಯಿಸಿರುವ ಘಟನೆ ಬೆಳಕಿಗೆ ಬಂದಿದೆ.
ಸಂತ್ರಸ್ತರು ಜೂನ್ 3ರಂದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಸಂದರ್ಭದಲ್ಲಿ ತಮ್ಮ ಡೆಬಿಟ್ ಕಾರ್ಡ್ ಬಳಸಿ ಆಸ್ಪತ್ರೆಯ ಬಿಲ್ ಪಾವತಿಸಿದ್ದರು. ಅದರ ಬಳಿಕ ಅವರು ಯಾವುದೇ ರೀತಿಯ ಹಣಕಾಸು ವ್ಯವಹಾರ ನಡೆಸಿರಲಿಲ್ಲ. ಆದರೆ ಜೂನ್ 8ರಂದು ಖಾತೆಯಿಂದ ಹಣ ಕಡಿತಗೊಂಡಿರುವ ಕುರಿತು ಮೊಬೈಲ್‌ಗೆ ಎಸ್‌ಎಂಎಸ್ ಸಂದೇಶ ಬಂದ ಹಿನ್ನೆಲೆಯಲ್ಲಿ ಅವರಿಗೆ ಅನುಮಾನ ಉಂಟಾಯಿತು.
ತಕ್ಷಣ ಬ್ಯಾಂಕ್‌ಗೆ ಭೇಟಿ ನೀಡಿ ಖಾತೆಯ ವ್ಯವಹಾರಗಳ ವಿವರ ಪರಿಶೀಲಿಸಿದಾಗ, ಜೂನ್ 5ರಿಂದ ಜೂನ್ 8ರ ಅವಧಿಯಲ್ಲಿ ಅವರ ಅನುಮತಿ ಅಥವಾ ತಿಳುವಳಿಕೆ ಇಲ್ಲದೆ ಅಪರಿಚಿತ ಖಾತೆಯೊಂದಕ್ಕೆ ಒಟ್ಟು 2.12 ಲಕ್ಷ ರೂಪಾಯಿ ವರ್ಗಾವಣೆ ಮಾಡಿರುವುದು ಪತ್ತೆಯಾಗಿದೆ.
ಈ ಕುರಿತು ಸಂತ್ರಸ್ತರು ಉಡುಪಿ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಮಾಹಿತಿ ತಂತ್ರಜ್ಞಾನ ಕಾಯ್ದೆಯ ಸೆಕ್ಷನ್ 66(ಡಿ) ಅಡಿಯಲ್ಲಿ ಪ್ರಕರಣ ದಾಖಲಿಸಿರುವ ಪೊಲೀಸರು ವಂಚಕರ ಪತ್ತೆಗೆ ತನಿಖೆ ಕೈಗೊಂಡಿದ್ದಾರೆ.





