ಉಪ್ಪಿನಂಗಡಿ: ವೈವಾಹಿಕ ಕಲಹದ ಹಿನ್ನೆಲೆಯಲ್ಲಿ ಇಬ್ಬರು ಮಕ್ಕಳನ್ನು ಬಾವಿಗೆಸೆದ ಆರೋಪದ ಪ್ರಕರಣದಲ್ಲಿ ಬಂಧಿಸಲ್ಪಟ್ಟಿದ್ದ ಮಹಿಳೆಗೆ ಪುತ್ತೂರು ನ್ಯಾಯಾಲಯ 15 ದಿನಗಳ ನ್ಯಾಯಾಂಗ ಬಂಧನ ವಿಧಿಸಿದೆ.
ಪೆರ್ನೆ ಸಮೀಪದ ಮೈರಕಟ್ಟೆಯಲ್ಲಿ ಈ ಘಟನೆ ನಡೆದಿದ್ದು, ಅಲ್ಲಿನ ನಿವಾಸಿ ನೂರುನ್ನಿಸಾ ಆರೋಪಿಯಾಗಿದ್ದಾರೆ. ಪತಿ ಸಿನಾನ್ ಅವರೊಂದಿಗೆ ಫೋನ್ ಮೂಲಕ ವೈವಾಹಿಕ ವಿಚಾರಕ್ಕೆ ಸಂಬಂಧಿಸಿದಂತೆ ನಡೆದ ಜಗಳದ ಬಳಿಕ ನೂರುನ್ನಿಸಾ ಕೋಪಗೊಂಡಿದ್ದರು ಎನ್ನಲಾಗಿದೆ.
ಈ ವೇಳೆ ಮನೆಯಲ್ಲಿದ್ದ ತನ್ನ ಸುಮಾರು ಮೂರೂವರೆ ವರ್ಷದ ಹೆಣ್ಣು ಮಗು ಹಾಗೂ ಪತಿಯ ಸಹೋದರಿಯ ಸುಮಾರು ಮೂರು ವರ್ಷದ ಗಂಡು ಮಗುವನ್ನು ಮನೆಯ ಸಮೀಪದ ಬಾವಿಗೆ ಎಸೆದಿದ್ದಾರೆ ಎಂದು ಆರೋಪಿಸಲಾಗಿದೆ.
ಮಕ್ಕಳು ಬಾವಿಗೆ ಬಿದ್ದಿರುವುದನ್ನು ಗಮನಿಸಿದ ಸ್ಥಳೀಯರು ತಕ್ಷಣ ಸ್ಥಳಕ್ಕೆ ಧಾವಿಸಿ ಇಬ್ಬರನ್ನೂ ಮೇಲಕ್ಕೆತ್ತಿದ್ದಾರೆ. ಆದರೆ ಪತಿಯ ಸಹೋದರಿಯ ಮಗುವಾಗಿದ್ದ ರಬೀಜ್ ಮೃತಪಟ್ಟಿದ್ದು, ನೂರುನ್ನಿಸಾಳ ಮಗುವನ್ನು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ.
ಘಟನೆಗೆ ಸಂಬಂಧಿಸಿದಂತೆ ಉಪ್ಪಿನಂಗಡಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ಕೃತ್ಯ ನಡೆದ ಬಳಿಕ ಮನೆಯಲ್ಲಿಯೇ ಇದ್ದ ನೂರುನ್ನಿಸಾಳನ್ನು ಬಂಧಿಸಿದ್ದರು.
ಸೆಪ್ಟೆಂಬರ್ 20ರಂದು ಆರೋಪಿಯನ್ನು ಪುತ್ತೂರು ನ್ಯಾಯಾಲಯದ ನ್ಯಾಯಾಧೀಶರ ಮುಂದೆ ಹಾಜರುಪಡಿಸಲಾಗಿತ್ತು. ವಿಚಾರಣೆ ನಡೆಸಿದ ನ್ಯಾಯಾಲಯವು ನೂರುನ್ನಿಸಾಗೆ 15 ದಿನಗಳ ನ್ಯಾಯಾಂಗ ಬಂಧನ ವಿಧಿಸಿ ಆದೇಶಿಸಿದೆ.





