20 June 2026 |

ಉಡುಪಿ ಹೋಮ್ ಸ್ಟೇ ಮೇಲೆ ಪೊಲೀಸ್ ದಾಳಿ: ಎಂಡಿಎಂಎ, ಗಾಂಜಾ ಪತ್ತೆ; 7 ಮಂದಿ ವಶಕ್ಕೆ

  • 19 Jun 2026 07:31:02 PM

ಉಡುಪಿ: ಜಿಲ್ಲೆಯ ತಾಲೂಕಿನ ತೆಂಕನಿಡಿಯೂರು ಗ್ರಾಮದ ತೊಟ್ಟಂ ಚರ್ಚ್ ಸಮೀಪದಲ್ಲಿರುವ ವಿಶ್ರಾಮ್ ಹೋಮ್ ಸ್ಟೇ ಮೇಲೆ ಮಲ್ಪೆ ಪೊಲೀಸರು ನಡೆಸಿದ ದಾಳಿಯಲ್ಲಿ ಎಂಡಿಎಂಎ ಹಾಗೂ ಗಾಂಜಾ ಸೇರಿದಂತೆ ಮಾದಕ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಹೋಮ್ ಸ್ಟೇ ಮಾಲೀಕರನ್ನು ಒಳಗೊಂಡಂತೆ ಏಳು ಮಂದಿಯನ್ನು ಬಂಧಿಸಲಾಗಿದೆ.

 

ಹೋಮ್ ಸ್ಟೇಯಲ್ಲಿ ಅಕ್ರಮವಾಗಿ ಮಾದಕ ವಸ್ತುಗಳನ್ನು ಸಂಗ್ರಹಿಸಿ ಸಾರ್ವಜನಿಕರಿಗೆ ಮಾರಾಟ ಮಾಡಲಾಗುತ್ತಿದೆ ಎಂಬ ವಿಶ್ವಾಸಾರ್ಹ ಮಾಹಿತಿಯ ಆಧಾರದ ಮೇಲೆ ಈ ಕಾರ್ಯಾಚರಣೆ ಕೈಗೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

 

ಉಡುಪಿ ಉಪವಿಭಾಗದ ಪೊಲೀಸ್ ಉಪಾಧೀಕ್ಷಕರು ಹಾಗೂ ಮಲ್ಪೆ ವೃತ್ತ ನಿರೀಕ್ಷಕರ ಮಾರ್ಗದರ್ಶನದಲ್ಲಿ ಮಲ್ಪೆ ಪೊಲೀಸ್ ಠಾಣೆಯ ಉಪನಿರೀಕ್ಷಕ ಅನೀಲ್ ಕುಮಾರ್ ಡಿ., ಪಿಎಸ್‌ಐ ಗಂಗಪ್ಪ ಎಸ್. ಮತ್ತು ಸಿಬ್ಬಂದಿಗಳ ತಂಡ ದಾಳಿ ನಡೆಸಿತು.

 

ಕಾರ್ಯಾಚರಣೆಯ ವೇಳೆ ಹೋಮ್ ಸ್ಟೇಯ ಒಂದು ಕೊಠಡಿಯಲ್ಲಿ ಇದ್ದ ನಾಜೀಲ್, ಮೊಹಮ್ಮದ್ ಅಜರುದ್ದೀನ್, ಮೊಹಮ್ಮದ್ ಅಫ್ಘಾನ್ ಮತ್ತು ವಿಶ್ಲೇಶ್ ಎಂಬ ನಾಲ್ವರನ್ನು ಪರಿಶೀಲಿಸಿದಾಗ ಅವರು ಮಾದಕ ವಸ್ತು ಸೇವಿಸಿರುವುದು ಬೆಳಕಿಗೆ ಬಂದಿದೆ. ನಂತರ ಪಂಚರ ಸಮ್ಮುಖದಲ್ಲಿ ನಡೆಸಿದ ಶೋಧ ಕಾರ್ಯದಲ್ಲಿ 33.81 ಗ್ರಾಂ ಗಾಂಜಾ, 9.73 ಗ್ರಾಂ ಎಂಡಿಎಂಎ, ಐದು ಮೊಬೈಲ್ ಫೋನ್‌ಗಳು ಸೇರಿದಂತೆ ಹಲವು ವಸ್ತುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.