ಬಂಟ್ವಾಳ: ಸಾರ್ವಜನಿಕರ ಅನುಕೂಲಕ್ಕಾಗಿ ನಿರ್ಮಿಸಲಾದ ಶೌಚಾಲಯವೊಂದು ಬಳಕೆಯಾಗದೇ ನಿರ್ಲಕ್ಷ್ಯಕ್ಕೆ ಒಳಗಾಗಿರುವ ಘಟನೆ ಪಾಣೆಮಂಗಳೂರು ಪೇಟೆಯಲ್ಲಿ ಕಂಡುಬಂದಿದೆ. ಸುಮಾರು ಎರಡು ವರ್ಷಗಳ ಹಿಂದೆ ಬಂಟ್ವಾಳ ಪುರಸಭೆಯ ಅನುದಾನದಲ್ಲಿ ನಿರ್ಮಿಸಲಾದ ಈ ಸಾರ್ವಜನಿಕ ಶೌಚಾಲಯ ಉದ್ಘಾಟನೆಯಾದ ಬಳಿಕ ಇದೀಗ ಬೀಗ ಹಾಕಿದ ಸ್ಥಿತಿಯಲ್ಲಿ ಬಿದ್ದಿದ್ದು, ಜನರಿಗೆ ಯಾವುದೇ ಪ್ರಯೋಜನವಾಗುತ್ತಿಲ್ಲ.
ಸ್ಥಳೀಯರ ಪ್ರಕಾರ, ಸಾರ್ವಜನಿಕ ಶೌಚಾಲಯದ ಅಗತ್ಯ ಹೆಚ್ಚಾಗಿ ಮೆಲ್ಕಾರ್ ಪೇಟೆ ಪ್ರದೇಶದಲ್ಲಿದ್ದರೂ, ಪಾಣೆಮಂಗಳೂರು ಪೇಟೆಯಲ್ಲಿ ಇದನ್ನು ನಿರ್ಮಿಸಲಾಗಿದೆ. ಅಲ್ಲದೆ, ಸಮೀಪದಲ್ಲೇ ಪುರಸಭೆಗೆ ಸೇರಿದ ಕಟ್ಟಡದಲ್ಲಿ ಈಗಾಗಲೇ ಶೌಚಾಲಯ ಸೌಲಭ್ಯವಿದ್ದರೂ ರಸ್ತೆ ಬದಿಯಲ್ಲೇ ಮತ್ತೊಂದು ಶೌಚಾಲಯ ನಿರ್ಮಿಸಿರುವುದು ಪ್ರಶ್ನೆಗಳನ್ನು ಹುಟ್ಟುಹಾಕಿದೆ.
ಸಾರ್ವಜನಿಕರ ವಿರೋಧದ ನಡುವೆಯೇ ರಾಜಕೀಯ ಪ್ರಭಾವದಿಂದ ಈ ಯೋಜನೆ ಜಾರಿಗೊಂಡಿದೆ ಎಂಬ ಆರೋಪಗಳೂ ಕೇಳಿಬರುತ್ತಿವೆ. ಆದರೆ ನಿರ್ಮಾಣಗೊಂಡ ಬಳಿಕ ಸಮರ್ಪಕ ನಿರ್ವಹಣೆ ಮತ್ತು ಬಳಕೆಯ ವ್ಯವಸ್ಥೆ ಇಲ್ಲದ ಕಾರಣ ಕಟ್ಟಡ ನಿರುಪಯುಕ್ತವಾಗಿ ಉಳಿದಿದೆ.
ಈ ಜಾಗದಲ್ಲಿ ವಾಣಿಜ್ಯ ಕಟ್ಟಡ ನಿರ್ಮಿಸಿದ್ದರೆ ಸಾರ್ವಜನಿಕರಿಗೂ ಅನುಕೂಲವಾಗುತ್ತಿತ್ತು ಹಾಗೂ ಪುರಸಭೆಗೆ ಆದಾಯವೂ ದೊರೆಯಬಹುದಾಗಿತ್ತು ಎಂದು ಸಮಾಜಸೇವಕ ಖಾಲಿದ್ ನಂದಾವರ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.





