ಮಂಗಳೂರು: ಮೀನುಗಾರಿಕೆ ನಿಷೇಧ ಅವಧಿಯ ಹಿನ್ನೆಲೆಯಲ್ಲಿ ಪ್ರತಿ ವರ್ಷವೂ ಮೊಟ್ಟೆಗೆ ಬೇಡಿಕೆ ಹೆಚ್ಚಾಗುವುದು ಸಾಮಾನ್ಯ. ಆದರೆ ಈ ಬಾರಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಉಂಟಾಗಿರುವ ಬೆಳವಣಿಗೆಗಳು ಹಾಗೂ ಉತ್ಪಾದನಾ ವೆಚ್ಚದಲ್ಲಿ ಕಂಡುಬಂದ ಏರಿಕೆ ಮೊಟ್ಟೆ ದರ ಏರಿಕೆಗೆ ಪ್ರಮುಖ ಕಾರಣಗಳಾಗಿವೆ. ಕೋಳಿಗಳಿಗೆ ನೀಡುವ ಔಷಧಗಳ ಬೆಲೆ ಹೆಚ್ಚಿರುವುದರ ಜೊತೆಗೆ ಮೆಕ್ಕೆಜೋಳದ ದರದಲ್ಲೂ ಏರಿಕೆಯಾಗಿರುವುದರಿಂದ ಒಂದು ಮೊಟ್ಟೆಯ ಬೆಲೆ 8 ರೂಪಾಯಿಗಿಂತ ಹೆಚ್ಚಿನ ಮಟ್ಟ ತಲುಪಿದೆ.
ಇದರ ಜೊತೆಗೆ ಹವಾಮಾನದಲ್ಲಿನ ನಿರಂತರ ಬದಲಾವಣೆಗಳು ಮೊಟ್ಟೆ ಉತ್ಪಾದನೆ ಮೇಲೆ ಪ್ರತಿಕೂಲ ಪರಿಣಾಮ ಬೀರಿವೆ. ಶಾಲೆಗಳು ಪುನರಾರಂಭಗೊಂಡಿರುವುದರಿಂದ ಮಾರುಕಟ್ಟೆಯಲ್ಲಿ ಮೊಟ್ಟೆಯ ಬೇಡಿಕೆ ಹೆಚ್ಚಾಗಿದೆ. ಮತ್ತೊಂದೆಡೆ, ಮೀನುಗಳ ಲಭ್ಯತೆ ಕಡಿಮೆಯಾಗಿರುವ ಕಾರಣ ಹೆಚ್ಚಿನ ಮಂದಿ ಮೊಟ್ಟೆಯನ್ನು ಪರ್ಯಾಯ ಆಹಾರವಾಗಿ ಬಳಸುತ್ತಿರುವುದು ಕಂಡುಬಂದಿದೆ. ಇದರಿಂದ ಪೂರೈಕೆಯ ಮೇಲೆ ಹೆಚ್ಚುವರಿ ಒತ್ತಡ ಉಂಟಾಗಿ, ಮಾರುಕಟ್ಟೆಯಲ್ಲಿ ಮೊಟ್ಟೆ ದರ ಏರಿಕೆಯ ಪ್ರವೃತ್ತಿ ಮುಂದುವರಿದಿದೆ.
ಮೀನುಗಾರಿಕೆ ಚಟುವಟಿಕೆಗಳ ಮೇಲಿನ ನಿರ್ಬಂಧ, ಆಹಾರ ಪದಾರ್ಥಗಳ ಬೆಲೆ ಏರಿಕೆ ಹಾಗೂ ಉತ್ಪಾದನಾ ವೆಚ್ಚದಲ್ಲಿ ಹೆಚ್ಚಳದಿಂದ ಮುಂದಿನ ದಿನಗಳಲ್ಲಿಯೂ ಮೊಟ್ಟೆ ಬೆಲೆಯಲ್ಲಿ ಹೆಚ್ಚಿನ ಇಳಿಕೆ ಕಂಡುಬರುವ ಸಾಧ್ಯತೆ ಕಡಿಮೆ ಎನ್ನಲಾಗುತ್ತಿದೆ.





