21 June 2026 |

ಸುರತ್ಕಲ್ ತೀರದ ಸೆಲ್ಫಿ ಪಾಯಿಂಟ್ ಮಾಯ! ಇತಿಹಾಸದ ಪುಟ ಸೇರಿದ ಹಲವು ವರ್ಷಗಳಿಂದ ಗಮನ ಸೆಳೆದಿದ್ದ ‘ಭಗವತಿ ಪ್ರೇಮ್’ ಹಡಗು

  • 21 Jun 2026 12:38:30 PM

ಮಂಗಳೂರು: ಸುರತ್ಕಲ್‌ನ ಗುಡ್ಡೆಕೊಪ್ಲ ಕಡಲತೀರದಲ್ಲಿ ಕಳೆದ ಹಲವು ವರ್ಷಗಳಿಂದ ಜನರ ಗಮನ ಸೆಳೆಯುತ್ತಿದ್ದ ಬೃಹತ್ ಗಾತ್ರದ ‘ಭಗವತಿ ಪ್ರೇಮ್’ ಡ್ರೆಡ್ಡರ್ ಹಡಗು ಇದೀಗ ಇತಿಹಾಸದ ಪುಟ ಸೇರಲಿದ್ದು, ಹಡಗನ್ನು ಒಡೆಯುವ ಕಾರ್ಯ ಭರದಿಂದ ಸಾಗುತ್ತಿದೆ.

 

ಕಡಲತೀರಕ್ಕೆ ಭೇಟಿ ನೀಡುವ ಪ್ರವಾಸಿಗರು, ಯುವಕರು ಹಾಗೂ ಛಾಯಾಗ್ರಹಣ ಪ್ರಿಯರಿಗೆ ಈ ಹಡಗು ಪ್ರಮುಖ ಆಕರ್ಷಣೆಯಾಗಿತ್ತು. ಕಡಲ ತೀರದ ಹಿನ್ನೆಲೆಯೊಂದಿಗೆ ಹಡಗಿನ ಮುಂದೆ ಸೆಲ್ಫಿ ಹಾಗೂ ಫೋಟೋಗಳನ್ನು ತೆಗೆಯಲು ಪ್ರತಿದಿನ ನೂರಾರು ಮಂದಿ ಭೇಟಿ ನೀಡುತ್ತಿದ್ದರು. ಇದರ ಪರಿಣಾಮವಾಗಿ ಈ ಪ್ರದೇಶವು ಅನೌಪಚಾರಿಕವಾಗಿ ‘ಸೆಲ್ಫಿ ಪಾಯಿಂಟ್’ ಎಂದೇ ಗುರುತಿಸಿಕೊಂಡಿತ್ತು.

 

ಕಳೆದ ಕೆಲವು ವರ್ಷಗಳಿಂದ ಕಡಲ ತೀರದಲ್ಲಿ ನಿಂತಿದ್ದ ‘ಭಗವತಿ ಪ್ರೇಮ್’ ಹಡಗು ಸ್ಥಳೀಯರು ಹಾಗೂ ಪ್ರವಾಸಿಗರ ಕುತೂಹಲಕ್ಕೆ ಕಾರಣವಾಗಿತ್ತು. ಇದೀಗ ಹಡಗನ್ನು ತುಂಡು ತುಂಡಾಗಿ ಕತ್ತರಿಸಿ ತೆರವುಗೊಳಿಸುವ ಕಾರ್ಯ ಆರಂಭಗೊಂಡಿದ್ದು, ನಿಧಾನವಾಗಿ ಅದರ ಅಸ್ತಿತ್ವವೇ ಮಾಯವಾಗುತ್ತಿದೆ.

 

ಹಡಗು ತೆರವುಗೊಳ್ಳುತ್ತಿರುವ ದೃಶ್ಯವನ್ನು ನೋಡಲು ಸಹ ಜನರು ಕಡಲತೀರಕ್ಕೆ ಆಗಮಿಸುತ್ತಿದ್ದಾರೆ. ಹಲವು ವರ್ಷಗಳಿಂದ ಸುರತ್ಕಲ್ ತೀರದ ಗುರುತಾಗಿ ಕಾಣಿಸಿಕೊಂಡಿದ್ದ ಈ ಹಡಗು ಇಲ್ಲವಾಗುತ್ತಿರುವುದು ಸ್ಥಳೀಯರಲ್ಲಿ ಒಂದಷ್ಟು ಬೇಸರಕ್ಕೂ ಕಾರಣವಾಗಿದೆ.

 

ಒಮ್ಮೆ ಜನರ ಕ್ಯಾಮೆರಾ ಕಣ್ಣಿನ ಮೆಚ್ಚಿನ ತಾಣವಾಗಿದ್ದ ‘ಭಗವತಿ ಪ್ರೇಮ್’ ಹಡಗು ಶೀಘ್ರದಲ್ಲೇ ಸಂಪೂರ್ಣವಾಗಿ ಮಾಯವಾಗಲಿದ್ದು, ಸುರತ್ಕಲ್ ಕಡಲತೀರದ ಮತ್ತೊಂದು ನೆನಪಾಗಿ ಉಳಿಯಲಿದೆ.