22 June 2026 |

ಗ್ಯಾರಂಟಿ ಯೋಜನೆಗಳಿಂದ ಸರ್ಕಾರಿ ನೌಕರರಿಗೆ ಹೊರಗುಳಿಯುವ ಸಾಧ್ಯತೆ? ಸರ್ಕಾರದ ಮಟ್ಟದಲ್ಲಿ ಚರ್ಚೆ ಆರಂಭ

  • 22 Jun 2026 01:35:44 PM

ಬೆಂಗಳೂರು: ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳ ಮರುಪರಿಶೀಲನೆ ಪ್ರಕ್ರಿಯೆ ನಡೆಯುತ್ತಿರುವ ನಡುವೆಯೇ, ಸರ್ಕಾರಿ ನೌಕರರ ಕುಟುಂಬಗಳನ್ನು ಈ ಸೌಲಭ್ಯಗಳ ವ್ಯಾಪ್ತಿಯಿಂದ ಹೊರಗಿಡುವ ಕುರಿತು ಚರ್ಚೆಗಳು ಆರಂಭವಾಗಿವೆ.

 

ಗ್ಯಾರಂಟಿ ಯೋಜನೆಗಳ ಅನುಷ್ಠಾನ ಮತ್ತು ಪರಿಶೀಲನೆ ನಡೆಸುತ್ತಿರುವ ಪ್ರಾಧಿಕಾರವು ಈ ವಿಷಯವನ್ನು ಗಂಭೀರವಾಗಿ ಪರಿಗಣಿಸುತ್ತಿದ್ದು, ಸರ್ಕಾರಿ ನೌಕರರಿಗೆ ನೀಡಲಾಗುತ್ತಿರುವ ಸೌಲಭ್ಯಗಳನ್ನು ಮಿತಿಗೊಳಿಸುವ ಸಾಧ್ಯತೆಗಳ ಕುರಿತು ಚರ್ಚೆ ನಡೆಸುತ್ತಿದೆ. ಈ ಹಂತದಲ್ಲಿ, ಅರ್ಹತೆ ಇದ್ದರೂ ಸ್ವಯಂಪ್ರೇರಿತವಾಗಿ ಗ್ಯಾರಂಟಿ ಯೋಜನೆಗಳ ಲಾಭವನ್ನು ತ್ಯಜಿಸುವಂತೆ ಸರ್ಕಾರಿ ನೌಕರರಿಗೆ ಮನವಿ ಮಾಡುವ ಆಲೋಚನೆಯೂ ಮುಂದಿದೆ.

 

ಈ ಕುರಿತು ಮಾತನಾಡಿದ ಗ್ಯಾರಂಟಿ ಪ್ರಾಧಿಕಾರದ ಅಧ್ಯಕ್ಷ ಹೆಚ್.ಎಂ. ರೇವಣ್ಣ ಅವರು, ಜಿಎಸ್‌ಟಿ ಪಾವತಿದಾರರು ಹಾಗೂ ಆದಾಯ ತೆರಿಗೆ ವ್ಯಾಪ್ತಿಯಲ್ಲಿರುವವರಿಗೆ ಗ್ಯಾರಂಟಿ ಸೌಲಭ್ಯಗಳನ್ನು ನೀಡುವ ಬಗ್ಗೆ ಮರುಚಿಂತನೆ ನಡೆಯುತ್ತಿದೆ ಎಂದು ತಿಳಿಸಿದರು. ಈ ವಿಷಯವಾಗಿ ಸರ್ಕಾರಿ ನೌಕರರ ಸಂಘಗಳು ಸೇರಿದಂತೆ ವಿವಿಧ ಸಂಘಟನೆಗಳೊಂದಿಗೆ ಚರ್ಚೆ ನಡೆಸಲಾಗುವುದು. ಫಲಾನುಭವಿಗಳು ಸ್ವಯಂಪ್ರೇರಿತವಾಗಿ ಯೋಜನೆಗಳಿಂದ ಹೊರಬರುವ ಬಗ್ಗೆ ಸಹ ಸಮಾಲೋಚನೆ ನಡೆಸುವುದು ಪ್ರಾಧಿಕಾರದ ಕಾರ್ಯಸೂಚಿಯಲ್ಲಿದೆ ಎಂದು ಹೇಳಿದರು.

 

ಇದಕ್ಕೆ ಪ್ರತಿಕ್ರಿಯಿಸಿದ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಷಡಕ್ಷರಿ, ಈ ಬಗ್ಗೆ ಪ್ರಾಧಿಕಾರ ಅಧಿಕೃತವಾಗಿ ಚರ್ಚೆಗೆ ಬಂದರೆ ಸಂಘದ ನಿಲುವನ್ನು ತಿಳಿಸಲಾಗುವುದು ಎಂದರು. ಗ್ಯಾರಂಟಿ ಯೋಜನೆಗಳನ್ನು ನಾವು ಬೇಡಿಕೆ ಇಟ್ಟು ಪಡೆದದ್ದಲ್ಲ, ಸರ್ಕಾರವೇ ಜಾರಿಗೊಳಿಸಿದೆ. ಈಗ ಅವುಗಳನ್ನು ಹಿಂಪಡೆಯುವ ಬಗ್ಗೆ ಮಾತುಗಳು ಕೇಳಿಬರುತ್ತಿವೆ. ವಿಶೇಷವಾಗಿ ಶಕ್ತಿ ಯೋಜನೆಯಿಂದ ಮಹಿಳಾ ನೌಕರರಿಗೆ ಸಾಕಷ್ಟು ಅನುಕೂಲವಾಗಿದೆ. ಈ ವಿಷಯದಲ್ಲಿ ನಮ್ಮ ಅಭಿಪ್ರಾಯವನ್ನು ಸೂಕ್ತ ವೇದಿಕೆಯಲ್ಲಿ ತಿಳಿಸುತ್ತೇವೆ ಎಂದು ಅವರು ಹೇಳಿದರು.