21 September 2026 |

9 ತಿಂಗಳ ಶಿಶುವಿನ ಮೇಲೆ ಲೈಂಗಿಕ ದೌರ್ಜನ್ಯ; 12 ವರ್ಷದ ಬಾಲಕ ಪೊಲೀಸ್ ವಶಕ್ಕೆ

  • 22 Jun 2026 01:40:11 PM

ಉತ್ತರಪ್ರದೇಶ: ಮಾನವೀಯತೆಯನ್ನು ಬೆಚ್ಚಿಬೀಳಿಸುವ ಘಟನೆ ಉತ್ತರ ಪ್ರದೇಶದಲ್ಲಿಬೆಳಕಿಗೆ ಬಂದಿದೆ. ಗೋರಖ್‌ಪುರ ಜಿಲ್ಲೆಯ ಗುಲರಿಹಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ 9 ತಿಂಗಳ ಹೆಣ್ಣುಮಗುವಿನ ಮೇಲೆ 12 ವರ್ಷದ ಬಾಲಕ ಲೈಂಗಿಕ ದೌರ್ಜನ್ಯ ಎಸಗಿದ ಆರೋಪ ಎದುರಿಸುತ್ತಿದ್ದಾನೆ.

 

ಶುಕ್ರವಾರ ತಡರಾತ್ರಿ ತಾಯಿಯ ಪಕ್ಕದಲ್ಲಿ ಮಲಗಿದ್ದ ಮಗು ಏಕಾಏಕಿ ಕಾಣೆಯಾಗಿತ್ತು. ಇದರಿಂದ ಆತಂಕಗೊಂಡ ಕುಟುಂಬದವರು ಗ್ರಾಮ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಹುಡುಕಾಟ ನಡೆಸಿದ್ದರು. ಬಳಿಕ ಶನಿವಾರ ಬೆಳಿಗ್ಗೆ ಮನೆಯ ಸಮೀಪದ ಜಮೀನಿನಲ್ಲಿ ಮಗು ಪತ್ತೆಯಾಗಿದೆ.

 

ಮಗುವನ್ನು ತಕ್ಷಣ ಆಸ್ಪತ್ರೆಗೆ ಸಾಗಿಸಿ ಚಿಕಿತ್ಸೆ ನೀಡಲಾಗಿದ್ದು, ವೈದ್ಯಕೀಯ ಪರೀಕ್ಷೆಯಲ್ಲಿ ಲೈಂಗಿಕ ದೌರ್ಜನ್ಯ ನಡೆದಿರುವುದು ದೃಢಪಟ್ಟಿದೆ. ಮಗುವಿನ ಆರೋಗ್ಯ ಸ್ಥಿತಿ ಗಂಭೀರವಾಗಿದ್ದು, ವೈದ್ಯರ ಮೇಲ್ವಿಚಾರಣೆಯಲ್ಲಿ ಚಿಕಿತ್ಸೆ ಮುಂದುವರಿದಿದೆ.

 

ಪ್ರಕರಣ ದಾಖಲಿಸಿಕೊಂಡ ಪೊಲೀಸರು ಕುಟುಂಬದ ಸದಸ್ಯರು ಮತ್ತು ಸಂಬಂಧಿಕರನ್ನು ವಿಚಾರಣೆ ನಡೆಸಿದ ವೇಳೆ, ಕುಟುಂಬದ ಸಂಬಂಧಿಯಾಗಿರುವ 12 ವರ್ಷದ ಬಾಲಕನ ಮೇಲೆ ಅನುಮಾನ ವ್ಯಕ್ತವಾಯಿತು. ಮೂರು ದಿನಗಳ ಹಿಂದೆ ಚಂಡೀಗಢದಿಂದ ಗ್ರಾಮಕ್ಕೆ ಬಂದಿದ್ದ ಆತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗಿದೆ.

 

ತನಿಖೆಯ ವೇಳೆ ಬಾಲಕ ಕೃತ್ಯ ಎಸಗಿರುವುದಾಗಿ ಒಪ್ಪಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಅಲ್ಲದೆ, ಆತನ ಮೊಬೈಲ್‌ ಫೋನ್‌ ಪರಿಶೀಲಿಸಿದಾಗ ಅಶ್ಲೀಲ ವಿಡಿಯೋಗಳು ಹಾಗೂ ಅಶ್ಲೀಲ ವೆಬ್‌ಸೈಟ್‌ಗಳನ್ನು ವೀಕ್ಷಿಸಿದ್ದ ಮಾಹಿತಿ ಪತ್ತೆಯಾಗಿದೆ.

 

ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಹೆಚ್ಚಿನ ತನಿಖೆ ಮುಂದುವರಿಸಿದ್ದು, ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ವರದಿಗಳು ತಿಳಿಸಿವೆ.