23 June 2026 |

ಜೀರ್ಣೋದ್ಧಾರ ಕಾರ್ಯಕ್ಕೆ ಭಕ್ತರ ಕೈಜೋಡಿಕೆ: ಕಡೇಶಿವಾಲಯ ಶ್ರೀ ಲಕ್ಷ್ಮೀ ನರಸಿಂಹ ಸ್ವಾಮಿ ದೇವಸ್ಥಾನದಲ್ಲಿ 500ಕ್ಕೂ ಅಧಿಕ ಮಂದಿಯಿಂದ ಕರಸೇವೆ

  • 23 Jun 2026 01:19:44 AM

ಕಡೇಶಿವಾಲಯ: ಬಂಟ್ವಾಳ ತಾಲೂಕಿನ ಕಡೇಶಿವಾಲಯದ ಮಹಾತೋಭಾರ ಚಿಂತಾಮಣಿ ಶ್ರೀ ಲಕ್ಷ್ಮೀ ನರಸಿಂಹ ಸ್ವಾಮಿ ದೇವಸ್ಥಾನದ ಜೀರ್ಣೋದ್ಧಾರ ಕಾರ್ಯದ ಅಂಗವಾಗಿ ಕಳೆದ ನಾಲ್ಕು ದಿನಗಳಿಂದ ನಡೆಯುತ್ತಿರುವ ಕರಸೇವೆಗೆ ಭಕ್ತರಿಂದ ಉತ್ತಮ ಸ್ಪಂದನೆ ವ್ಯಕ್ತವಾಗಿದೆ.

 

ಕರಸೇವೆಯಲ್ಲಿ 500ಕ್ಕೂ ಅಧಿಕ ಭಕ್ತರು ಪಾಲ್ಗೊಂಡಿದ್ದು, ದೇವಸ್ಥಾನದ ಸುತ್ತುಪೌಳಿ, ತೀರ್ಥಮಂಟಪ ಹಾಗೂ ಇತರ ಕಟ್ಟಡಗಳ ತೆರವು ಕಾರ್ಯದಲ್ಲಿ ಶ್ರಮದಾನ ಮಾಡಿದ್ದಾರೆ. ಗ್ರಾಮಸ್ಥರು, ವಿವಿಧ ಸಂಘ-ಸಂಸ್ಥೆಗಳ ಪದಾಧಿಕಾರಿಗಳು, ಸ್ವಸಹಾಯ ಸಂಘಗಳ ಸದಸ್ಯರು ಹಾಗೂ ಭಕ್ತಾದಿಗಳು ಸ್ವಯಂಪ್ರೇರಿತವಾಗಿ ಭಾಗವಹಿಸಿ ಜೀರ್ಣೋದ್ಧಾರ ಕಾರ್ಯಕ್ಕೆ ಕೈಜೋಡಿಸಿದ್ದಾರೆ.

 

ಕರಸೇವೆಯಲ್ಲಿ ಪಾಲ್ಗೊಂಡ ಭಕ್ತರಿಗೆ ಅನ್ನದಾನ ಹಾಗೂ ಭೋಜನ ವ್ಯವಸ್ಥೆಯನ್ನು ಸ್ಥಳೀಯ ಭಕ್ತರು ಮತ್ತು ಸೇವಾಕರ್ತರು ಒದಗಿಸಿದ್ದು, ತೆಂಗಿನಕಾಯಿ, ತರಕಾರಿ ಸೇರಿದಂತೆ ಅಗತ್ಯ ಸಾಮಗ್ರಿಗಳನ್ನು ದಾನವಾಗಿ ನೀಡುವ ಮೂಲಕ ಸಹಕರಿಸಿದ್ದಾರೆ.

 

ಕರಸೇವಕರ ಶ್ರಮದಿಂದ ದೇವಸ್ಥಾನದ ಜೀರ್ಣೋದ್ಧಾರ ಕಾರ್ಯಕ್ಕೆ ಹೊಸ ಚೈತನ್ಯ ದೊರೆತಿದ್ದು, ಮುಂದಿನ ದಿನಗಳಲ್ಲಿಯೂ ಇದೇ ರೀತಿಯ ಸಹಕಾರ ಮುಂದುವರಿಯುವ ನಿರೀಕ್ಷೆ ಇದೆ ಎಂದು ಕರಸೇವಾ ಸಮಿತಿ ತಿಳಿಸಿದೆ.

 

ಈ ಸಂದರ್ಭದಲ್ಲಿ ಅನ್ನದಾನ ಸೇವೆ, ಅಡುಗೆ ವ್ಯವಸ್ಥೆ ಹಾಗೂ ವಿವಿಧ ರೀತಿಯ ಸಹಕಾರ ನೀಡಿದ ಭಕ್ತರಿಗೆ ಕೃತಜ್ಞತೆ ಸಲ್ಲಿಸಲಾಗಿದ್ದು, ದೇವಸ್ಥಾನದ ಆಡಳಿತ ಮಂಡಳಿ, ಜೀರ್ಣೋದ್ಧಾರ ಸಮಿತಿ ಹಾಗೂ ಗ್ರಾಮಸ್ಥರ ಸಹಕಾರವನ್ನು ಸಮಿತಿ ಅಭಿನಂದಿಸಿದೆ.