25 June 2026 |

ಹತ್ತಾರು ಚಾಲಕರು, ಜಿಪಿಎಸ್ ತಂತ್ರ.. ₹1.65 ಕೋಟಿ ಮದ್ಯ ಸಾಗಾಟದ ಅಂತರರಾಜ್ಯ ಜಾಲ ವಿಜಯಪುರದಲ್ಲಿ ಬಯಲು

  • 25 Jun 2026 09:25:06 AM

ವಿಜಯಪುರ: ಗೋವಾದಿಂದ ಮಹಾರಾಷ್ಟ್ರಕ್ಕೆ ಅಕ್ರಮವಾಗಿ ಮದ್ಯ ಸಾಗಿಸುತ್ತಿದ್ದ ಅಂತರರಾಜ್ಯ ಖದೀಮರ ಜಾಲವನ್ನು ವಿಜಯಪುರ ಪೊಲೀಸರು ಪತ್ತೆಹಚ್ಚಿದ್ದಾರೆ. ಹಲವು ಜಿಲ್ಲೆಗಳ ಪೊಲೀಸರ ಕಣ್ಣಿಗೆ ಮಣ್ಣೆರಚಿ ಕಾರ್ಯಾಚರಣೆ ನಡೆಸುತ್ತಿದ್ದ ಈ ಜಾಲದ ನಾಲ್ವರು ಸದಸ್ಯರನ್ನು ಬಂಧಿಸಲಾಗಿದ್ದು, ಸುಮಾರು ₹1.65 ಕೋಟಿ ಮೌಲ್ಯದ ಮದ್ಯ ಹಾಗೂ ಸಾಗಾಟಕ್ಕೆ ಬಳಸಿದ್ದ ಟ್ರಕ್‌ ಅನ್ನು ವಶಪಡಿಸಿಕೊಳ್ಳಲಾಗಿದೆ.

 

ಪ್ರಕರಣಕ್ಕೆ ಸಂಬಂಧಿಸಿದಂತೆ ಶ್ರೀನಿವಾಸ್, ಹುಸೇನ್‌ಸಾಬ್ ಮುಲ್ಲಾ, ಬಸವರಾಜ್ ಭಜಂತ್ರಿ ಮತ್ತು ಸಿದ್ದರಾಮ ಡಾಲೆ ಬಂಧಿತರಾಗಿದ್ದಾರೆ. ಗೋವಾದಿಂದ ಮಹಾರಾಷ್ಟ್ರಕ್ಕೆ ಮದ್ಯ ಸಾಗಿಸಲು ಆರೋಪಿಗಳು ವಿಭಿನ್ನ ತಂತ್ರವನ್ನು ಅನುಸರಿಸಿದ್ದರು.

 

ಸಾಗಾಟದ ಮಾರ್ಗದ ಸಂಪೂರ್ಣ ಮಾಹಿತಿ ಬಹಿರಂಗವಾಗದಂತೆ ಟ್ರಕ್‌ಗೆ ಹತ್ತಾರು ಚಾಲಕರನ್ನು ಬಳಸಲಾಗುತ್ತಿತ್ತು. ಪ್ರತಿಯೊಬ್ಬ ಚಾಲಕನಿಗೆ ಜಿಪಿಎಸ್ ಮೂಲಕ ನಿಗದಿಪಡಿಸಿದ ಒಂದು ಸ್ಥಳದವರೆಗೆ ಮಾತ್ರ ವಾಹನ ಚಲಾಯಿಸುವ ಜವಾಬ್ದಾರಿ ನೀಡಲಾಗುತ್ತಿತ್ತು. ಆ ಸ್ಥಳ ತಲುಪಿದ ಬಳಿಕ ಮತ್ತೊಬ್ಬ ಚಾಲಕ ವಾಹನದ ನಿಯಂತ್ರಣ ವಹಿಸಿಕೊಳ್ಳುತ್ತಿದ್ದ.

 

ಇದಲ್ಲದೆ, ಟ್ರಕ್‌ನಲ್ಲಿದ್ದ ಮದ್ಯವನ್ನು ಮರೆಮಾಚುವ ಉದ್ದೇಶದಿಂದ ಅದರ ಮೇಲ್ಭಾಗದಲ್ಲಿ ಎರೆಹುಳ ಗೊಬ್ಬರವನ್ನು ಹೊದಿಸಲಾಗಿತ್ತು. ಈ ಯೋಜನೆಯ ನೆರವಿನಿಂದ ಟ್ರಕ್ ಬೆಳಗಾವಿ, ಧಾರವಾಡ ಹಾಗೂ ಬಾಗಲಕೋಟೆ ಜಿಲ್ಲೆಗಳ ವ್ಯಾಪ್ತಿಯನ್ನು ಯಾವುದೇ ತೊಂದರೆಯಿಲ್ಲದೆ ದಾಟಿತ್ತು.

 

ಆದರೆ ವಿಜಯಪುರ ಪ್ರವೇಶಿಸುವ ವೇಳೆ ಪೊಲೀಸರಿಗೆ ಅನುಮಾನ ಮೂಡಿದ್ದು, ಪರಿಶೀಲನೆ ನಡೆಸಿದಾಗ ಅಕ್ರಮ ಮದ್ಯ ಸಾಗಾಟದ ಜಾಲ ಬೆಳಕಿಗೆ ಬಂದಿದೆ. ಬಂಧಿತರಿಂದ ವಿಚಾರಣೆ ಮುಂದುವರಿಸಿರುವ ಪೊಲೀಸರು, ಈ ಜಾಲದ ಹಿಂದೆ ಇನ್ನೂ ಯಾರಾದರೂ ಇದ್ದಾರೆಯೇ ಎಂಬ ಕುರಿತು ತನಿಖೆ ನಡೆಸುತ್ತಿದ್ದಾರೆ.