25 June 2026 |

ಆನ್‌ಲೈನ್ ಟ್ರೇಡಿಂಗ್ ನೆಪದಲ್ಲಿ 20 ಲಕ್ಷ ದರೋಡೆ: ಸಿಐಡಿ ಇನ್ಸ್‌ಪೆಕ್ಟರ್ ಸೇರಿ ಮೂವರು ಬಂಧನ

  • 25 Jun 2026 09:31:09 AM

ಬೆಂಗಳೂರು: ಆನ್‌ಲೈನ್ ಟ್ರೇಡಿಂಗ್ ಹೆಸರಿನಲ್ಲಿ ಕೇರಳದ ಯುವಕರನ್ನು ಬೆಂಗಳೂರಿಗೆ ಕರೆಸಿ 20 ಲಕ್ಷ ರೂಪಾಯಿಗೂ ಅಧಿಕ ಹಣ ದೋಚಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಐಡಿ ಇನ್ಸ್‌ಪೆಕ್ಟರ್ ಸೇರಿದಂತೆ ಮೂವರನ್ನು ಮಡಿವಾಳ ಪೊಲೀಸರು ಬಂಧಿಸಿದ್ದಾರೆ.

 

ಬಂಧಿತರನ್ನು ಸಿಐಡಿ ಇನ್ಸ್‌ಪೆಕ್ಟರ್ ಮಹೇಶ್ ಕನಕಗಿರಿ, ಕುಪೇಂದ್ರ ರೆಡ್ಡಿ ಹಾಗೂ ವಸಂತ್ ಕುಮಾರ್ ಎಂದು ಗುರುತಿಸಲಾಗಿದೆ. ಪ್ರಕರಣ ಮಡಿವಾಳ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.

 

ಆನ್‌ಲೈನ್ ಟ್ರೇಡಿಂಗ್‌ನಲ್ಲಿ 25 ಲಕ್ಷ ರೂಪಾಯಿ ಹೂಡಿಕೆ ಮಾಡಿದರೆ 50 ಲಕ್ಷ ರೂಪಾಯಿ ಲಾಭ ದೊರೆಯುತ್ತದೆ ಎಂದು ಕೇರಳ ಮೂಲದ ಯುವಕರಿಗೆ ನಂಬಿಕೆ ಮೂಡಿಸಲಾಗಿತ್ತು. ಈ ಆಮಿಷಕ್ಕೆ ಒಳಗಾದ ಅವರು 25 ಲಕ್ಷ ರೂಪಾಯಿ ಹಣದೊಂದಿಗೆ ಬೆಂಗಳೂರಿನ ಮಡಿವಾಳದಲ್ಲಿರುವ ಸಿಲಿಕಾನ್ ವ್ಯಾಲಿ ಹೋಟೆಲ್‌ಗೆ ಆಗಮಿಸಿದ್ದರು.

 

ಯುವಕರು ಹೋಟೆಲ್‌ಗೆ ಬಂದಿರುವ ಮಾಹಿತಿ ಕುಪೇಂದ್ರ ರೆಡ್ಡಿಗೆ ತಲುಪಿದ ಬಳಿಕ, ಆತ ಮತ್ತು ಆತನ ಸಹಚರರು ಪೊಲೀಸ್ ಅಧಿಕಾರಿಗಳಂತೆ ನಟಿಸಿ ಇನ್ಸ್‌ಪೆಕ್ಟರ್ ಬಳಕೆಯ ಜೀಪ್‌ನಲ್ಲಿ ಹೋಟೆಲ್‌ಗೆ ತೆರಳಿದ್ದಾರೆ. ಪೊಲೀಸ್ ಗುರುತಿನ ಚೀಟಿ ತೋರಿಸಿ ಯುವಕರನ್ನು ಬೆದರಿಸಿದ ಆರೋಪಿಗಳು, ಬಳಿಕ ಹಲ್ಲೆ ನಡೆಸಿ 20 ಲಕ್ಷ ರೂಪಾಯಿಗೂ ಹೆಚ್ಚು ಹಣ ಕಸಿದುಕೊಂಡು ಪರಾರಿಯಾಗಿದ್ದಾರೆ ಎನ್ನಲಾಗಿದೆ.

 

ಘಟನೆಯ ನಂತರ ಕುಪೇಂದ್ರ ರೆಡ್ಡಿ ಹಣದೊಂದಿಗೆ ಪೊಲೀಸ್ ಜೀಪ್‌ನಲ್ಲಿ ತಪ್ಪಿಸಿಕೊಂಡಿದ್ದರೆ, ಉಳಿದವರು ಬೈಕ್‌ನಲ್ಲಿ ಸ್ಥಳದಿಂದ ಪರಾರಿಯಾಗಿದ್ದರು ಎಂದು ತಿಳಿದುಬಂದಿದೆ.

 

ಈ ಸಂಬಂಧ ಕೇರಳದ ಯುವಕರು ಮಡಿವಾಳ ಪೊಲೀಸ್ ಠಾಣೆಗೆ ದೂರು ನೀಡಿದ್ದು, ತನಿಖೆ ಕೈಗೊಂಡ ಪೊಲೀಸರು ಮೂವರನ್ನೂ ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ. ಆರೋಪಿಗಳ ವಿರುದ್ಧ ದರೋಡೆ, ಬೆದರಿಕೆ, ಹಲ್ಲೆ ಹಾಗೂ ಒಳಸಂಚು ಸೇರಿದಂತೆ ವಿವಿಧ ಆರೋಪಗಳಡಿ ಪ್ರಕರಣ ದಾಖಲಿಸಲಾಗಿದೆ.

 

ಮಡಿವಾಳ ಎಸಿಪಿ ವಾಸುದೇವ್ ನೇತೃತ್ವದಲ್ಲಿ ತನಿಖೆ ನಡೆಯುತ್ತಿದ್ದು, ಆರೋಪಿಗಳು ಈ ಹಿಂದೆ ಕೂಡ ಇದೇ ರೀತಿಯ ಕೃತ್ಯಗಳಲ್ಲಿ ತೊಡಗಿದ್ದಾರೆಯೇ ಎಂಬ ಕುರಿತು ಪರಿಶೀಲನೆ ನಡೆಸಲಾಗುತ್ತಿದೆ. ಅಧಿಕಾರವನ್ನು ದುರುಪಯೋಗಪಡಿಸಿಕೊಂಡು ಇಂತಹ ಪ್ರಕರಣಗಳಲ್ಲಿ ಭಾಗಿಯಾಗಿರುವ ಸಾಧ್ಯತೆಯ ಬಗ್ಗೆಯೂ ಪೊಲೀಸರು ತನಿಖೆ ಮುಂದುವರಿಸಿದ್ದಾರೆ. ಸದ್ಯ ಆರೋಪಿಗಳ ಹೇಳಿಕೆಗಳನ್ನು ದಾಖಲಿಸಿಕೊಳ್ಳಲಾಗುತ್ತಿದ್ದು, ಪ್ರಕರಣದ ಎಲ್ಲಾ ಆಯಾಮಗಳಲ್ಲೂ ತನಿಖೆ ಸಾಗುತ್ತಿದೆ.