ಬೆಂಗಳೂರು: ತಂದೆ, ತಾಯಿ ಹಾಗೂ ಸಹೋದರಿಯ ಹತ್ಯೆ ಪ್ರಕರಣದಲ್ಲಿ ಆರೋಪಿಯಾಗಿರುವ ಶ್ವೇತಾಳನ್ನು ಕೆ.ಆರ್.ಪುರ ಪೊಲೀಸರು ಪಾಂಡಿಚೇರಿಯಲ್ಲಿ ಬಂಧಿಸಿ ಬುಧವಾರ ಬೆಂಗಳೂರಿಗೆ ಕರೆತಂದಿದ್ದಾರೆ. ಪ್ರಕರಣದ ಮತ್ತೊಬ್ಬ ಆರೋಪಿ ಹಾಗೂ ಆಕೆಯ ಪ್ರಿಯಕರ ಕೆನೆತ್ ಇನ್ನೂ ತಲೆಮರೆಸಿಕೊಂಡಿದ್ದು, ಆತನ ಪತ್ತೆಗೆ ವಿಶೇಷ ತಂಡಗಳು ಶೋಧ ಕಾರ್ಯ ಮುಂದುವರಿಸಿವೆ.
ಸೀಗೇನಹಳ್ಳಿ ಸಮೀಪದ ಅಪಾರ್ಟ್‌ಮೆಂಟ್‌ನಲ್ಲಿ ಸೋಮವಾರ ರಾತ್ರಿ ನಡೆದ ಈ ಭೀಕರ ಘಟನೆಯಲ್ಲಿ ಶ್ವೇತಾ ಮತ್ತು ಕೆನೆತ್ ಸೇರಿ ಆಕೆಯ ತಂದೆ, ತಾಯಿ ಹಾಗೂ ತಂಗಿಯನ್ನು ಹತ್ಯೆ ಮಾಡಿರುವ ಆರೋಪ ಎದುರಿಸುತ್ತಿದ್ದಾರೆ. ಈ ಘಟನೆ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಚರ್ಚೆಗೆ ಗ್ರಾಸವಾಗಿದ್ದು, ಆರೋಪಿಗಳ ಬಂಧನಕ್ಕಾಗಿ ಪೊಲೀಸರು ತೀವ್ರ ಕಾರ್ಯಾಚರಣೆ ನಡೆಸಿದ್ದರು.
ಹತ್ಯೆ ನಡೆದ ಬಳಿಕ ಇಬ್ಬರೂ ರಾಜ್ಯದ ಹೊರಗೆ ಪರಾರಿಯಾಗಿದ್ದರು. ಆರಂಭದಲ್ಲಿ ಮನೆಯಿಂದ ಬೈಕ್‌ನಲ್ಲಿ ಹೊರಟ ಅವರು ಕೆಲ ಸಮಯ ಕೆ.ಆರ್.ಪುರ ಸುತ್ತಮುತ್ತ ಸಂಚರಿಸಿ ನಂತರ ತಮಿಳುನಾಡಿನತ್ತ ಪ್ರಯಾಣ ಬೆಳೆಸಿದ್ದರು. ಮಾರ್ಗಮಧ್ಯೆ ಬೈಕ್ ಬಿಟ್ಟು ಬಸ್ ಮೂಲಕ ತೆರಳಿದ್ದ ಅವರು ಮಂಗಳವಾರ ಮುಂಜಾನೆ ತಿರುವಣ್ಣಾಮಲೈ ತಲುಪಿದ್ದಾರೆ ಎನ್ನಲಾಗಿದೆ. ಅಲ್ಲಿಂದ ಇಬ್ಬರೂ ಬೇರೆ ಬೇರೆ ಬಸ್‌ಗಳಲ್ಲಿ ಪ್ರಯಾಣ ಮುಂದುವರಿಸಿದ್ದರು.
ಆರೋಪಿಗಳ ಚಲನವಲನಗಳನ್ನು ಪತ್ತೆಹಚ್ಚಿದ ಪೊಲೀಸರು ಪಾಂಡಿಚೇರಿಯಲ್ಲಿ ಶ್ವೇತಾಳನ್ನು ವಶಕ್ಕೆ ಪಡೆದು ಬಳಿಕ ಬೆಂಗಳೂರಿಗೆ ಕರೆತಂದು ಕಾನೂನು ಪ್ರಕ್ರಿಯೆ ಕೈಗೊಂಡಿದ್ದಾರೆ. ಇತ್ತ ಕೆನೆತ್‌ನ ಸುಳಿವಿಗಾಗಿ ಶೋಧ ಕಾರ್ಯ ಮುಂದುವರಿದಿದ್ದು, ಶೀಘ್ರದಲ್ಲೇ ಆತನನ್ನೂ ಬಂಧಿಸುವ ವಿಶ್ವಾಸವನ್ನು ಅಧಿಕಾರಿಗಳು ವ್ಯಕ್ತಪಡಿಸಿದ್ದಾರೆ.
ಪ್ರಕರಣದ ತನಿಖೆ ವೇಳೆ ಶ್ವೇತಾ ನೀಡುತ್ತಿರುವ ಹೇಳಿಕೆಗಳಲ್ಲಿ ವ್ಯತ್ಯಾಸ ಕಂಡುಬರುತ್ತಿದೆ ಎಂದು ಮೂಲಗಳು ತಿಳಿಸಿವೆ. ಆರಂಭದಲ್ಲಿ ತನ್ನ ಸ್ವತಂತ್ರ ಜೀವನಕ್ಕೆ ಪೋಷಕರು ಅಡ್ಡಿಯಾಗಿದ್ದರಿಂದ ಈ ಕೃತ್ಯ ಎಸಗಿದ್ದಾಗಿ ಹೇಳಿದ್ದಾಳೆ ಎನ್ನಲಾಗಿದೆ. ನಂತರ ತಾನು ಯಾರನ್ನೂ ಹತ್ಯೆ ಮಾಡಿಲ್ಲ, ಕೆನೆತ್ ಚಾಕುವಿನಿಂದ ಹಲ್ಲೆ ನಡೆಸಿದ್ದಾನೆ ಎಂದು ಹೇಳಿಕೆ ಬದಲಿಸಿದ್ದಾಳೆ ಎಂದು ತಿಳಿದುಬಂದಿದೆ.
ಕೆನೆತ್ ಬಂಧನವಾದ ಬಳಿಕ ಘಟನೆಯ ಸಂಪೂರ್ಣ ಸತ್ಯಾಂಶ ಹೊರಬರಲಿದ್ದು, ಹತ್ಯೆಯ ಹಿಂದಿನ ನಿಖರ ಕಾರಣಗಳೂ ಸ್ಪಷ್ಟವಾಗಲಿವೆ ಎಂದು ತನಿಖಾಧಿಕಾರಿಗಳು ಅಭಿಪ್ರಾಯಪಟ್ಟಿದ್ದಾರೆ.





