ವಿಟ್ಲ: ವನ್ಯಜೀವಿ ಉತ್ಪನ್ನವಾಗಿರುವ ಅಮೂಲ್ಯ ಅಂಬರ್‌ಗ್ರೀಸ್ (ತಿಮಿಂಗಿಲ ವಾಂತಿ) ಅನ್ನು ಯಾವುದೇ ಕಾನೂನುಬದ್ಧ ಅನುಮತಿ ಇಲ್ಲದೆ ಮಾರಾಟ ಮಾಡಲು ಮುಂದಾಗಿದ್ದ ಇಬ್ಬರನ್ನು ವಿಟ್ಲ ಪೊಲೀಸರು ಬಂಧಿಸಿದ್ದಾರೆ. ಬಂಧಿತರನ್ನು ಬಂಟ್ವಾಳ ತಾಲೂಕಿನ ಕರೋಪಾಡಿ ಗ್ರಾಮದ ಮುಗುಳಿ ಮನೆ ನಿವಾಸಿ ಕುಮುದಾಕ್ಷ (27) ಹಾಗೂ ವಿಟ್ಲ ಕಸಬಾ ಗ್ರಾಮದ ಒಕ್ಕೆತ್ತೂರು ನಿವಾಸಿ ಧನು ಕುಮಾರ್ (32) ಎಂದು ಗುರುತಿಸಲಾಗಿದೆ.
ಜೂನ್ 24ರ ರಾತ್ರಿ ವಿಟ್ಲ ಪೊಲೀಸ್ ಉಪನಿರೀಕ್ಷಕ (ಕಾನೂನು ಮತ್ತು ಸುವ್ಯವಸ್ಥೆ) ರಾಮಕೃಷ್ಣ ಅವರು ಸಿಬ್ಬಂದಿಯೊಂದಿಗೆ ರಾತ್ರಿ ಗಸ್ತು ಕರ್ತವ್ಯದಲ್ಲಿದ್ದ ವೇಳೆ, ಜೂನ್ 25ರ ಮುಂಜಾನೆ ಸುಮಾರು 12.15 ಗಂಟೆಗೆ ಖಚಿತ ಮಾಹಿತಿ ಲಭಿಸಿತ್ತು. ಮಾಮೇಶ್ವರ ಭಾಗದಿಂದ ಕಂಬಳಬೆಟ್ಟು ರಸ್ತೆಯ ಮೂಲಕ ಇಬ್ಬರು ವ್ಯಕ್ತಿಗಳು ಸ್ಕೂಟರ್‌ನಲ್ಲಿ ಅಂಬರ್‌ಗ್ರೀಸ್ ಮಾದರಿಯನ್ನು ತೋರಿಸಿ ಹೆಚ್ಚಿನ ಬೆಲೆಗೆ ಮಾರಾಟ ಮಾಡಲು ಬರುತ್ತಿದ್ದಾರೆ ಎಂಬ ಮಾಹಿತಿ ದೊರೆತ ಹಿನ್ನೆಲೆಯಲ್ಲಿ ಪೊಲೀಸರು ಪಂಚರು ಮತ್ತು ಸಿಬ್ಬಂದಿಯೊಂದಿಗೆ ವಿಟ್ಲ ಕಸಬಾ ಗ್ರಾಮದ ಬೋಳಂತಿಮೊಗರು ಪ್ರದೇಶದಲ್ಲಿ ಕಾರ್ಯಾಚರಣೆ ನಡೆಸಿದರು.
ಮುಂಜಾನೆ ಸುಮಾರು 1 ಗಂಟೆ ವೇಳೆಗೆ ಸ್ಕೂಟರ್‌ನಲ್ಲಿ ಬಂದಿದ್ದ ಇಬ್ಬರನ್ನು ಪೊಲೀಸರು ತಡೆಯಲು ಸೂಚಿಸಿದಾಗ, ಅವರು ವಾಹನವನ್ನು ಹಿಂದಕ್ಕೆ ತಿರುಗಿಸಿ ಪರಾರಿಯಾಗಲು ಯತ್ನಿಸಿದರು. ಆದರೆ ತಕ್ಷಣ ಕಾರ್ಯಪ್ರವೃತ್ತರಾದ ಪೊಲೀಸರು ಅವರನ್ನು ಸುತ್ತುವರಿದು ವಶಕ್ಕೆ ಪಡೆದರು.
ನಂತರ ನಡೆಸಿದ ಪರಿಶೀಲನೆ ವೇಳೆ ಆರೋಪಿ ಕುಮುದಾಕ್ಷ ತನ್ನ ಬಳಿ ಇದ್ದ ಪ್ಲಾಸ್ಟಿಕ್ ಕವರ್ ಅನ್ನು ಪೊಲೀಸರಿಗೆ ನೀಡಿದ್ದು, ಅದರೊಳಗೆ ಅಂಬರ್‌ಗ್ರೀಸ್ ಇರುವುದನ್ನು ಪತ್ತೆ ಹಚ್ಚಲಾಗಿದೆ. ವಿಚಾರಣೆಯಲ್ಲಿ ಈ ವಸ್ತುವನ್ನು ರಾಜೇಶ್ ಹಾಗೂ ಚಂದ್ರಮೋಹನ್ ಎಂಬವರು ನೀಡಿದ್ದಾಗಿ ಆರೋಪಿಗಳು ತಿಳಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಕಾರ್ಯಾಚರಣೆಯ ವೇಳೆ ಅಂಬರ್‌ಗ್ರೀಸ್, ಎರಡು ಮೊಬೈಲ್ ಫೋನ್‌ಗಳು ಹಾಗೂ ಕೃತ್ಯಕ್ಕೆ ಬಳಸಲಾಗಿದ್ದ ಕೆಎ-19-ಎಚ್‌ಆರ್-8680 ಸಂಖ್ಯೆಯ ಸ್ಕೂಟರ್ ಅನ್ನು ವಶಪಡಿಸಿಕೊಳ್ಳಲಾಗಿದೆ. ವಶಪಡಿಸಿಕೊಂಡ ವಸ್ತುಗಳ ಒಟ್ಟು ಮೌಲ್ಯ ಲಕ್ಷಾಂತರ ರೂಪಾಯಿಗಳಾಗಿರಬಹುದು ಎಂದು ಅಂದಾಜಿಸಲಾಗಿದೆ.
ಈ ಸಂಬಂಧ ವಿಟ್ಲ ಪೊಲೀಸ್ ಠಾಣೆಯಲ್ಲಿ ವನ್ಯಜೀವಿ ಸಂರಕ್ಷಣಾ ಕಾಯ್ದೆ-1972ರ ಕಲಂ 51 ಹಾಗೂ ಭಾರತೀಯ ನ್ಯಾಯ ಸಂಹಿತೆ (ಬಿಎನ್‌ಎಸ್-2023) ಕಲಂ 3(5) ಅಡಿಯಲ್ಲಿ ಪ್ರಕರಣ (ಅ.ಕ್ರ. 140/2026) ದಾಖಲಿಸಲಾಗಿದ್ದು, ಮುಂದಿನ ತನಿಖೆ ಮುಂದುವರಿದಿದೆ.





