ಬೆಂಗಳೂರು: ರಾಜ್ಯದ ಸಾಮಾಜಿಕ ಭದ್ರತಾ ಪಿಂಚಣಿ ಯೋಜನೆಗಳಲ್ಲಿ ಅಕ್ರಮವಾಗಿ ಸೌಲಭ್ಯ ಪಡೆಯುತ್ತಿರುವವರ ವಿರುದ್ಧ ಕಂದಾಯ ಇಲಾಖೆ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದೆ. ನಕಲಿ ದಾಖಲೆಗಳು ಅಥವಾ ಅನರ್ಹತೆಯ ನಡುವೆಯೂ ಪಿಂಚಣಿ ಪಡೆಯುತ್ತಿದ್ದವರನ್ನು ಗುರುತಿಸಿ, ಒಟ್ಟು 91,152 ಫಲಾನುಭವಿಗಳ ಪಿಂಚಣಿ ಖಾತೆಗಳನ್ನು ಶಾಶ್ವತವಾಗಿ ರದ್ದುಗೊಳಿಸಲು ಸರ್ಕಾರ ಆದೇಶಿಸಿದೆ.
ಯೋಜನೆಯ ಪ್ರಯೋಜನಗಳು ನಿಜವಾದ ಅರ್ಹರಿಗೆ ಮಾತ್ರ ತಲುಪಬೇಕು ಎಂಬ ಉದ್ದೇಶದಿಂದ ಈ ಕ್ರಮ ಜಾರಿಗೊಳಿಸಲಾಗಿದೆ. ಇದರ ಜೊತೆಗೆ ಅಗತ್ಯ ದಾಖಲೆಗಳನ್ನು ಸಲ್ಲಿಸದ 16,42,303 ಫಲಾನುಭವಿಗಳ ಪಿಂಚಣಿಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದ್ದು, ದಾಖಲೆಗಳನ್ನು ಸಲ್ಲಿಸಲು 30 ದಿನಗಳ ಗಡುವು ನೀಡಲಾಗಿದೆ.
ಗ್ರಾಮ ಆಡಳಿತ ಅಧಿಕಾರಿಗಳು ನಡೆಸಿದ ಪರಿಶೀಲನೆಯಲ್ಲಿ ಹಲವರು ಅರ್ಜಿ ಸಲ್ಲಿಸಿದ ವೇಳೆ ನೀಡಿದ್ದ ವಿಳಾಸದಲ್ಲಿ ವಾಸಿಸುತ್ತಿಲ್ಲ ಎಂಬುದು ಪತ್ತೆಯಾಗಿದೆ. ಕೆಲವರು ಮಾನ್ಯ ದಾಖಲೆಗಳನ್ನು ಒದಗಿಸಲು ವಿಫಲರಾಗಿದ್ದು, ಇನ್ನು ಕೆಲವರು ನವೀಕರಿಸಿದ ಆದಾಯ ಪ್ರಮಾಣಪತ್ರವನ್ನು ಸಲ್ಲಿಸಿರಲಿಲ್ಲ. ಈ ಹಿನ್ನೆಲೆಯಲ್ಲಿ ಅವರ ಪಿಂಚಣಿ ಪಾವತಿಯನ್ನು ಸದ್ಯಕ್ಕೆ ತಡೆಹಿಡಿಯಲಾಗಿದೆ.
ಪಿಂಚಣಿ ಸ್ಥಗಿತಗೊಂಡಿರುವ ಎಲ್ಲ ಫಲಾನುಭವಿಗಳಿಗೆ ತಹಶೀಲ್ದಾರರ ಮೂಲಕ ಅಧಿಕೃತ ನೋಟಿಸ್ ಮತ್ತು ಮಾಹಿತಿ ಪತ್ರ ನೀಡುವಂತೆ ಕಂದಾಯ ಇಲಾಖೆ ಸೂಚಿಸಿದೆ. ನಿಗದಿತ 30 ದಿನಗಳೊಳಗೆ ಅಗತ್ಯ ದಾಖಲೆಗಳನ್ನು ಸಲ್ಲಿಸುವ ಅವಕಾಶವೂ ಕಲ್ಪಿಸಲಾಗಿದೆ.
ಗಡುವಿನೊಳಗೆ ಸಲ್ಲಿಸಲಾದ ದಾಖಲೆಗಳನ್ನು ಅಧಿಕಾರಿಗಳು ಮರುಪರಿಶೀಲಿಸಲಿದ್ದಾರೆ. ಪರಿಶೀಲನೆಯ ನಂತರ ಫಲಾನುಭವಿಗಳು ಅರ್ಹರೆಂದು ದೃಢಪಟ್ಟರೆ, ಅವರ ಪಿಂಚಣಿ ಸೌಲಭ್ಯವನ್ನು ಮರು ಆರಂಭಿಸುವಂತೆ ರಾಜ್ಯದ ಎಲ್ಲಾ ಜಿಲ್ಲಾಧಿಕಾರಿಗಳು ಹಾಗೂ ತಹಶೀಲ್ದಾರರಿಗೆ ಕಂದಾಯ ಇಲಾಖೆಯ ಜಂಟಿ ನಿರ್ದೇಶಕರು ನಿರ್ದೇಶನ ನೀಡಿದ್ದಾರೆ.
ಸಾಮಾಜಿಕ ಭದ್ರತಾ ಯೋಜನೆಗಳ ದುರುಪಯೋಗಕ್ಕೆ ತಡೆ ಹಾಕಿ, ಸರ್ಕಾರದ ನೆರವು ನಿಜವಾದ ಅರ್ಹ ಮತ್ತು ಬಡ ಜನರಿಗೆ ಮಾತ್ರ ತಲುಪುವಂತೆ ಮಾಡುವ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗಿದೆ.





