ಪುತ್ತೂರು: ದಾಖಲೆಗಳಿಲ್ಲದೆ ಜಾನುವಾರನ್ನು ಹಿಂಸಾತ್ಮಕವಾಗಿ ಸಾಗಿಸುತ್ತಿದ್ದ ಪಿಕ್‌ಅಪ್ ವಾಹನವನ್ನು ಪುತ್ತೂರು ಗ್ರಾಮಾಂತರ ಠಾಣೆ ಪೊಲೀಸರು ವಶಕ್ಕೆ ಪಡೆದು, ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಈ ಕಾರ್ಯಾಚರಣೆ ಪೊಲೀಸ್ ಉಪನಿರೀಕ್ಷಕಿ ಸುಷ್ಮಾ ಜಿ. ಭಂಡಾರಿ ಅವರ ನೇತೃತ್ವದಲ್ಲಿ ನಡೆದಿದೆ.
ಬಂಧಿತ ಆರೋಪಿಗಳನ್ನು ಕಬಕ ಸಮೀಪದ ಕಲ್ಲಂದಡ್ಕ ನಿವಾಸಿ ಶರೀಫ್ ಅವರ ಪುತ್ರ ಮೊಯಿದುಕುಂಞ ಅಲಿಯಾಸ್ ಹಾಫಿಲ್ (20) ಹಾಗೂ ವಾಹನ ಚಾಲಕ ನಾರಾಯಣ ಎಂದು ಗುರುತಿಸಲಾಗಿದೆ. ಹಾಫಿಲ್ ವಿರುದ್ಧ ಈ ಹಿಂದೆಯೂ ಗೋಸಾಗಾಟ ಸಂಬಂಧಿತ ಪ್ರಕರಣ ದಾಖಲಾಗಿದ್ದು, ಆತ ಪೊಲೀಸರಿಗೆ ಪರಿಚಿತನಾಗಿದ್ದಾನೆ ಎಂದು ತಿಳಿದುಬಂದಿದೆ.
ಜೂನ್ 25ರಂದು ಸಂಜೆ ಅಕ್ರಮ ಗೋಸಾಗಾಟ ನಡೆಯುತ್ತಿರುವ ಬಗ್ಗೆ ದೊರೆತ ಖಚಿತ ಮಾಹಿತಿಯ ಆಧಾರದ ಮೇಲೆ ಪೊಲೀಸರು ಆರ್ಯಾಪು ಗ್ರಾಮದ ಮರಕ್ಕ ಪ್ರದೇಶದಲ್ಲಿ ವಾಹನ ತಪಾಸಣೆ ನಡೆಸಿದರು. ಈ ವೇಳೆ KA 21 5450 ನೋಂದಣಿ ಸಂಖ್ಯೆಯ ಪಿಕ್‌ಅಪ್ ವಾಹನವನ್ನು ತಡೆದು ಪರಿಶೀಲಿಸಿದಾಗ, ಅಗತ್ಯ ಅನುಮತಿ ಹಾಗೂ ದಾಖಲೆಗಳಿಲ್ಲದೆ ಒಂದು ಜಾನುವಾರನ್ನು ಕ್ರೂರ ರೀತಿಯಲ್ಲಿ ಸಾಗಿಸಲಾಗುತ್ತಿರುವುದು ಪತ್ತೆಯಾಯಿತು.
ಪರಿಶೀಲನೆ ವೇಳೆ ಜಾನುವಾರು ಸಾಗಾಟಕ್ಕೆ ಸಂಬಂಧಿಸಿದ ಯಾವುದೇ ಮಾನ್ಯ ದಾಖಲೆಗಳು ಇಲ್ಲದಿರುವುದು ಕಂಡುಬಂದ ಹಿನ್ನೆಲೆಯಲ್ಲಿ ಪೊಲೀಸರು ವಾಹನ ಸಮೇತ ಜಾನುವಾರನ್ನು ವಶಕ್ಕೆ ಪಡೆದು, ಇಬ್ಬರು ಆರೋಪಿಗಳನ್ನು ಬಂಧಿಸಿದರು.
ಈ ಹಿಂದೆಯೂ ಪ್ರಕರಣದಲ್ಲಿ ಸಿಕ್ಕಿಬಿದ್ದಿದ್ದ ಹಾಫಿಲ್
ಪ್ರಕರಣದ ಪ್ರಮುಖ ಆರೋಪಿ ಮೊಯಿದುಕುಂಞ ಅಲಿಯಾಸ್ ಹಾಫಿಲ್ ಈ ಹಿಂದೆಯೂ ಇದೇ ರೀತಿಯ ಪ್ರಕರಣದಲ್ಲಿ ಸಿಕ್ಕಿಬಿದ್ದಿದ್ದಾನೆ. ಸುಮಾರು ಎರಡು ವರ್ಷಗಳ ಹಿಂದೆ ಕಬಕ ಸಮೀಪ ಮಾರುತಿ ಸ್ವಿಫ್ಟ್ ಕಾರಿನಲ್ಲಿ ಗೋವುಗಳನ್ನು ಕಸಾಯಿಖಾನೆಗೆ ಸಾಗಿಸುತ್ತಿದ್ದ ವೇಳೆ ಬಜರಂಗದಳ ಕಾರ್ಯಕರ್ತರು ಬೆನ್ನಟ್ಟಿ ಹಿಡಿದು ಪೊಲೀಸರಿಗೆ ಒಪ್ಪಿಸಿದ್ದರು. ಆದರೆ ಆ ಸಂದರ್ಭದಲ್ಲಿ ಆತ ಅಪ್ರಾಪ್ತ ವಯಸ್ಕನಾಗಿದ್ದ ಕಾರಣ ಕಾನೂನು ಕ್ರಮಗಳಿಂದ ಪಾರಾಗಿದ್ದ. ಇದೀಗ ಮತ್ತೆ ಇದೇ ರೀತಿಯ ಚಟುವಟಿಕೆಯಲ್ಲಿ ತೊಡಗಿದ್ದ ಆರೋಪದಡಿ ಪೊಲೀಸರ ಬಲೆಗೆ ಬಿದ್ದಿದ್ದಾನೆ.
ಪ್ರಕರಣ ದಾಖಲು
ಆರೋಪಿಗಳ ವಿರುದ್ಧ ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಅಪರಾಧ ಸಂಖ್ಯೆ 95/2026 ದಾಖಲಿಸಲಾಗಿದೆ. ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣಾ ಕಾಯ್ದೆ-2020ರ ಕಲಂ 5, 7 ಹಾಗೂ 12 ಮತ್ತು ಪ್ರಾಣಿ ಹಿಂಸೆ ನಿಷೇಧ ಕಾಯ್ದೆ-1960ರ ಕಲಂ 11(ಡಿ) ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ಪೊಲೀಸರು ಮುಂದಿನ ತನಿಖೆ ಮುಂದುವರಿಸಿದ್ದಾರೆ.





