21 September 2026 |

ಇರ್ದೆ ಹೊಳೆಯಲ್ಲಿ ಅಕ್ರಮ ಮರಳು ಸಾಗಾಟಕ್ಕೆ ದಾಳಿ: ಮೂರು ಪಿಕಪ್ ವಶಕ್ಕೆ, ಮೂವರ ವಿರುದ್ಧ ಪ್ರಕರಣ ದಾಖಲು

  • 27 Jun 2026 01:32:20 PM

ಪುತ್ತೂರು: ತಾಲೂಕಿನ ಇರ್ದೆ ಗ್ರಾಮದ ಬೆಂದ್ರುತೀರ್ಥ ಸೀರೆ ಹೊಳೆಯಲ್ಲಿ ಅಕ್ರಮವಾಗಿ ಮರಳು ತೆಗೆಯಲಾಗುತ್ತಿರುವ ಬಗ್ಗೆ ಮಾಹಿತಿ ದೊರೆತ ಹಿನ್ನೆಲೆ ಪುತ್ತೂರು ಗ್ರಾಮಾಂತರ ಪೊಲೀಸರು ದಾಳಿ ನಡೆಸಿ ಮೂರು ಪಿಕಪ್ ವಾಹನಗಳನ್ನು ವಶಕ್ಕೆ ಪಡೆದು ಮೂವರು ಸೇರಿದಂತೆ ಸಂಬಂಧಪಟ್ಟವರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

 

ಜೂನ್ 20ರಂದು ಮಧ್ಯಾಹ್ನ ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಯ ಉಪನಿರೀಕ್ಷಕಿ (ತನಿಖೆ) ಸುಷ್ಮಾ ಜಿ. ಭಂಡಾರಿ ಅವರ ನೇತೃತ್ವದ ತಂಡ ರೌಂಡ್ಸ್ ಕರ್ತವ್ಯದಲ್ಲಿದ್ದ ವೇಳೆ ಬೆಂದ್ರುತೀರ್ಥ ಸೀರೆ ಹೊಳೆ ಪ್ರದೇಶಕ್ಕೆ ಭೇಟಿ ನೀಡಿತು. ಈ ವೇಳೆ ಕೆಲವು ಪಿಕಪ್ ವಾಹನಗಳಿಗೆ ಅಕ್ರಮವಾಗಿ ಮರಳು ತುಂಬಲಾಗುತ್ತಿರುವುದು ಪೊಲೀಸರ ಗಮನಕ್ಕೆ ಬಂದಿದೆ.

 

ಪೊಲೀಸರ ತಂಡ ಸ್ಥಳಕ್ಕೆ ಆಗಮಿಸುತ್ತಿದ್ದಂತೆಯೇ ಮರಳು ತುಂಬುವ ಕಾರ್ಯದಲ್ಲಿ ತೊಡಗಿದ್ದವರು ಉಪಕರಣಗಳನ್ನು ಅಲ್ಲೇ ಬಿಟ್ಟು ಪರಾರಿಯಾಗಿದ್ದಾರೆ. ಬಳಿಕ ಸ್ಥಳದಲ್ಲಿದ್ದ KA-46-9179, KA-70-5304 ಹಾಗೂ KA-21-C-4207 ನೋಂದಣಿ ಸಂಖ್ಯೆಯ ಮೂರು ಪಿಕಪ್ ವಾಹನಗಳನ್ನು ಪರಿಶೀಲಿಸಿದಾಗ ಅವುಗಳಲ್ಲಿ ಮರಳು ಸಾಗಾಟಕ್ಕೆ ಸಿದ್ಧಪಡಿಸಿರುವುದು ಪತ್ತೆಯಾಗಿದೆ.

 

ವಾಹನ ಚಾಲಕರಾದ ಅಬ್ದುಲ್ ರಜಾಕ್ (32), ಮಹಮ್ಮದ್ ಇರ್ಫಾನ್ (24) ಮತ್ತು ಆಲಿಕುಂಞ (36) ಅವರನ್ನು ವಿಚಾರಣೆ ನಡೆಸಿದ ವೇಳೆ ಮರಳು ತೆಗೆಯಲು ಅಥವಾ ಸಾಗಾಟ ಮಾಡಲು ಯಾವುದೇ ಮಾನ್ಯ ಪರವಾನಿಗೆ ಹೊಂದಿಲ್ಲ ಎಂಬುದು ಬೆಳಕಿಗೆ ಬಂದಿದೆ.

 

ಸರ್ಕಾರದ ಖನಿಜ ಸಂಪತ್ತಾದ ಮರಳನ್ನು ಅಕ್ರಮವಾಗಿ ತೆಗೆಯುವ ಹಾಗೂ ಸಾಗಾಟ ಮತ್ತು ಮಾರಾಟದ ಉದ್ದೇಶದಿಂದ ಕೃತ್ಯ ಎಸಗಿರುವ ಆರೋಪದಡಿ ಮೂವರು ಚಾಲಕರು, ವಾಹನ ಮಾಲೀಕರು ಹಾಗೂ ಇತರರ ವಿರುದ್ಧ BNS-2023 ಮತ್ತು ಗಣಿ-ಖನಿಜ ಸಂಬಂಧಿತ ಕಾನೂನುಗಳ ಅಡಿಯಲ್ಲಿ ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಘಟನೆಯ ಕುರಿತು ಹೆಚ್ಚಿನ ತನಿಖೆ ಮುಂದುವರಿದಿದೆ.