ವಿಟ್ಲ: ಮಂಗಿಲಪದವು ಬಸ್ ತಂಗುದಾಣದ ಸಮೀಪ ಅಕ್ರಮವಾಗಿ ಮದ್ಯ ಮಾರಾಟ ನಡೆಸುತ್ತಿದ್ದ ವ್ಯಕ್ತಿಯನ್ನು ವಿಟ್ಲ ಪೊಲೀಸರು ಬಂಧಿಸಿದ್ದು, ಆತನಿಂದ 4.5 ಲೀಟರ್ ವಿವಿಧ ಬಗೆಯ ಮದ್ಯ ಹಾಗೂ ₹300 ನಗದನ್ನು ವಶಪಡಿಸಿಕೊಂಡಿದ್ದಾರೆ.
ಜೂನ್ 26ರ ರಾತ್ರಿ ವೇಳೆ ಮಂಗಿಲಪದವು ಬಸ್ ತಂಗುದಾಣದ ಬಳಿ ಪರವಾನಿಗೆ ಇಲ್ಲದೆ ಮದ್ಯ ಮಾರಾಟ ನಡೆಯುತ್ತಿದೆ ಎಂಬ ಖಚಿತ ಮಾಹಿತಿ ವಿಟ್ಲ ಪೊಲೀಸ್ ಠಾಣೆಯ ನಿರೀಕ್ಷಕ ಪ್ರಕಾಶ್ ದೇವಾಡಿಗ ಅವರಿಗೆ ದೊರಕಿತ್ತು. ಮಾಹಿತಿ ಆಧರಿಸಿ ಪೊಲೀಸ್ ಸಿಬ್ಬಂದಿಯೊಂದಿಗೆ ಸ್ಥಳಕ್ಕೆ ತೆರಳಿದ ಅಧಿಕಾರಿಗಳು ದಾಳಿ ನಡೆಸಿದರು.
ಈ ವೇಳೆ ಸ್ಥಳದಲ್ಲಿ ಅನುಮಾನಾಸ್ಪದವಾಗಿ ತಂಗಿದ್ದ ವ್ಯಕ್ತಿಯನ್ನು ವಶಕ್ಕೆ ಪಡೆದು ಪರಿಶೀಲನೆ ನಡೆಸಿದಾಗ, ಆತನ ಬಳಿಯಿದ್ದ ಚೀಲದಲ್ಲಿ ವಿವಿಧ ಮಾದರಿಯ ಒಟ್ಟು 4.5 ಲೀಟರ್ ಮದ್ಯ ಪತ್ತೆಯಾಯಿತು. ಜೊತೆಗೆ ಮದ್ಯ ಮಾರಾಟದಿಂದ ಸಂಗ್ರಹಿಸಲಾಗಿದೆ ಎಂದು ಶಂಕಿಸಲಾದ ₹300 ನಗದನ್ನೂ ಪೊಲೀಸರು ವಶಪಡಿಸಿಕೊಂಡರು.
ಬಂಧಿತನನ್ನು ವಿಟ್ಲ ಕಸಬಾ ನಿವಾಸಿ ಲಕ್ಷ್ಮಣಗೌಡ (54) ಎಂದು ಗುರುತಿಸಲಾಗಿದೆ. ವಿಚಾರಣೆ ವೇಳೆ ಯಾವುದೇ ಕಾನೂನುಬದ್ಧ ಪರವಾನಿಗೆ ಇಲ್ಲದೆ ಹೆಚ್ಚಿನ ಬೆಲೆಗೆ ಮಾರಾಟ ಮಾಡುವ ಉದ್ದೇಶದಿಂದ ಮದ್ಯವನ್ನು ಸಂಗ್ರಹಿಸಿಟ್ಟಿರುವುದು ಬೆಳಕಿಗೆ ಬಂದಿದೆ.
ಘಟನೆಯ ಸಂಬಂಧ ಪೊಲೀಸರು ಮದ್ಯವನ್ನು ಜಪ್ತಿ ಮಾಡಿಕೊಂಡು, ಆರೋಪಿಯ ವಿರುದ್ಧ ಕರ್ನಾಟಕ ಅಬಕಾರಿ ಕಾಯ್ದೆ-1965ರ ಕಲಂ 15, 32 ಹಾಗೂ 34ರ ಅಡಿಯಲ್ಲಿ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಪ್ರಕರಣದ ತನಿಖೆ ಮುಂದುವರಿದಿದೆ.





