21 September 2026 |

ಸಹಕಾರದಿಂದ ನನಸಾದ ಸುಹಾಸ್ ಶೆಟ್ಟಿ ಕನಸಿನ ಮನೆ; ಗೃಹಪ್ರವೇಶದಲ್ಲಿ ಭಾವುಕರಾದ ಕುಟುಂಬ

  • 27 Jun 2026 02:09:25 PM

ಬಂಟ್ವಾಳ: ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿ ಅವರ ಕನಸಿನ ಮನೆ ಕೊನೆಗೂ ನನಸಾಗಿದೆ. ಸುಹಾಸ್ ಶೆಟ್ಟಿ ಅವರ ನಿಧನದ ಬಳಿಕ ಬಿಜೆಪಿ, ಆರ್‌ಎಸ್‌ಎಸ್ ಹಾಗೂ ವಿಶ್ವ ಹಿಂದೂ ಪರಿಷತ್ (ವಿಎಚ್‌ಪಿ) ಕಾರ್ಯಕರ್ತರು ಹಾಗೂ ಹಿತೈಷಿಗಳ ಸಹಕಾರದೊಂದಿಗೆ ನಿರ್ಮಾಣಗೊಂಡ ನೂತನ ಮನೆ ಇದೀಗ ಪೂರ್ಣಗೊಂಡಿದ್ದು, ಕುಟುಂಬ ಗೃಹಪ್ರವೇಶ ನೆರವೇರಿಸಿದೆ.

 

ಗೃಹಪ್ರವೇಶದ ಸಂದರ್ಭದಲ್ಲಿ ಮಾತನಾಡಿದ ಸುಹಾಸ್ ಶೆಟ್ಟಿ ಅವರ ತಂದೆ-ತಾಯಿ, ಮಗನ ಕನಸಿನ ಮನೆ ನಿರ್ಮಾಣಗೊಂಡಿರುವುದು ಸಂತಸದ ಸಂಗತಿಯಾಗಿದ್ದರೂ, ಅದನ್ನು ನೋಡಲು ಆತ ನಮ್ಮೊಂದಿಗೆ ಇಲ್ಲ ಎಂಬ ನೋವು ಎಂದಿಗೂ ಮರೆಯಲಾಗದು ಎಂದು ಭಾವುಕರಾದರು.

 

ಈ ಸಂದರ್ಭದಲ್ಲಿ ಅವರು ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಸಂಸದ ಕ್ಯಾ. ಬ್ರಿಜೇಶ್ ಚೌಟ ಅವರಿಗೆ ಕೃತಜ್ಞತೆ ಸಲ್ಲಿಸಿದರು. ತಮ್ಮ ಕುಟುಂಬದ ಯೋಗಕ್ಷೇಮವನ್ನು ಬಿಜೆಪಿ, ಆರ್‌ಎಸ್‌ಎಸ್ ಹಾಗೂ ವಿಶ್ವ ಹಿಂದೂ ಪರಿಷತ್‌ನ ಕಾರ್ಯಕರ್ತರು ನಿರಂತರವಾಗಿ ವಿಚಾರಿಸುತ್ತಿದ್ದು, ಸಂಸದ ಬ್ರಿಜೇಶ್ ಚೌಟ ಅವರು ಸಹ ಹಬ್ಬ-ಹರಿದಿನಗಳ ಸಂದರ್ಭಗಳಲ್ಲಿ ಕರೆ ಮಾಡಿ ಶುಭಾಶಯ ಕೋರುವುದರ ಜೊತೆಗೆ ಆರೋಗ್ಯ ವಿಚಾರಿಸುತ್ತಾರೆ ಎಂದು ಅವರು ತಿಳಿಸಿದರು.

 

ಸುಹಾಸ್ ಶೆಟ್ಟಿ ಅವರಿಗೆ ಹೊಸ ಮನೆಯ ಬಗ್ಗೆ ವಿಶೇಷ ಕನಸಿತ್ತು. ಬೆಳಿಗ್ಗೆ ಮನೆಯ ಹೊರಗೆ ಬಂದಾಗ ಶ್ರೀ ಕಾರಿಂಜೇಶ್ವರ ದೇವಸ್ಥಾನದ ದರ್ಶನವಾಗುವ ರೀತಿಯಲ್ಲಿ ಮನೆ ನಿರ್ಮಾಣವಾಗಬೇಕು ಎಂಬುದು ಅವರ ಆಶಯವಾಗಿತ್ತು. ಅದೇ ರೀತಿಯಲ್ಲಿ ಹೊಸ ಮನೆ ನಿರ್ಮಾಣಗೊಂಡಿರುವುದು ಕುಟುಂಬಕ್ಕೆ ಸಮಾಧಾನ ತಂದಿದೆ ಎಂದು ಅವರು ಹೇಳಿದರು.

 

ಮನೆ ನಿರ್ಮಾಣದಲ್ಲಿ ಶ್ರಮಿಸಿದ ಗುತ್ತಿಗೆದಾರರು, ಇಂಜಿನಿಯರ್‌ಗಳು ಹಾಗೂ ಸಹಕರಿಸಿದ ಎಲ್ಲರಿಗೂ ಕುಟುಂಬ ಕೃತಜ್ಞತೆ ಸಲ್ಲಿಸಿದ್ದಾರೆ. ನಾವು ಸ್ವತಃ ಮನೆ ಕಟ್ಟಿದ್ದರೆ ಇಷ್ಟೊಂದು ಗುಣಮಟ್ಟ ಹಾಗೂ ಅಂದವಾಗಿ ನಿರ್ಮಿಸಲು ಸಾಧ್ಯವಾಗುತ್ತಿರಲಿಲ್ಲ. ಈ ಮನೆ ಸುಹಾಸ್ ಅವರ ಕನಸಿನ ಮನೆಯಾಗಲು ಶ್ರಮಿಸಿದ ಪ್ರತಿಯೊಬ್ಬರಿಗೂ ಅದರ ಸಂಪೂರ್ಣ ಶ್ರೇಯಸ್ಸು ಸಲ್ಲಬೇಕು ಎಂದು ಸ್ಥಳೀಯ ಯುಟ್ಯೂಬ್ ಚಾನೆಲ್ (VJ Vikhyath) ನಲ್ಲಿ ಮಾತನಾಡಿದ ಕುಟುಂಬ ಅಭಿಪ್ರಾಯಪಟ್ಟಿತು.

 

ಮೂಲಗಳ ಪ್ರಕಾರ, ಸುಮಾರು ಆರು ತಿಂಗಳ ಅವಧಿಯಲ್ಲಿ ಮನೆ ನಿರ್ಮಾಣ ಕಾಮಗಾರಿ ಪೂರ್ಣಗೊಂಡಿದೆ. ಗಮನಾರ್ಹವಾಗಿ, 2025ರ ಮೇ 1ರ ಸಂಜೆ ಸುಹಾಸ್ ಶೆಟ್ಟಿ ಅವರ ಹತ್ಯೆ ನಡೆದಿತ್ತು. ಈ ಘಟನೆ ರಾಜ್ಯದಾದ್ಯಂತ ವ್ಯಾಪಕ ಚರ್ಚೆಗೆ ಗ್ರಾಸವಾಗಿದ್ದು, ಹಲವು ರಾಷ್ಟ್ರೀಯ ಮಾಧ್ಯಮಗಳಲ್ಲೂ ಪ್ರಮುಖವಾಗಿ ವರದಿಯಾಗಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಹಲವು ಆರೋಪಿಗಳನ್ನು ಬಂಧಿಸಿದ್ದು, ತನಿಖೆ ಇನ್ನೂ ಮುಂದುವರಿದಿದೆ.

 

ಕುಟುಂಬದ ಸದಸ್ಯರು ಹಾಗೂ ಬೆಂಬಲಿಗರ ಪ್ರಕಾರ, ಸುಹಾಸ್ ಶೆಟ್ಟಿ ಅವರ ಕನಸಿನ ಮನೆ ನಿರ್ಮಾಣವು ಅವರ ಕುಟುಂಬದೊಂದಿಗೆ ಬಿಜೆಪಿ, ಆರ್‌ಎಸ್‌ಎಸ್ ಹಾಗೂ ವಿಶ್ವ ಹಿಂದೂ ಪರಿಷತ್ ನಿಂತಿರುವುದರ ಪ್ರತೀಕವಾಗಿದೆ. ಸಂಕಷ್ಟದ ಸಮಯದಲ್ಲಿ ತಮ್ಮ ಕಾರ್ಯಕರ್ತರ ಕುಟುಂಬಗಳಿಗೆ ಬೆಂಬಲ ನೀಡುವ ಬದ್ಧತೆಯನ್ನು ಈ ಮೂಲಕ ತೋರಿಸಲಾಗಿದೆ ಎಂದು ಅವರು ಹೇಳಿದರು.