30 June 2026 |

ಚಲಿಸುತ್ತಿದ್ದ ಕಾರಿನ ಮೇಲೆ ಉರುಳಿದ ಮರ ಹಾಗೂ ವಿದ್ಯುತ್ ಕಂಬ; ದಂಪತಿ ಅಪಾಯದಿಂದ ಪಾರು

  • 29 Jun 2026 12:59:37 PM

ವಿಟ್ಲ: ಸಂಚರಿಸುತ್ತಿದ್ದ ಕಾರಿನ ಮೇಲೆ ಏಕಾಏಕಿ ಭಾರಿ ಗಾತ್ರದ ಮರ ಮತ್ತು ವಿದ್ಯುತ್ ಕಂಬ ಉರುಳಿಬಿದ್ದ ಪರಿಣಾಮ ಕಾರು ಭಾರೀ ಹಾನಿಗೊಳಗಾದರೂ, ಅದರಲ್ಲಿದ್ದ ದಂಪತಿ ಯಾವುದೇ ಪ್ರಾಣಾಪಾಯವಿಲ್ಲದೆ ಪಾರಾದ ಘಟನೆ ಅಡ್ಯನಡ್ಕ-ವಿಟ್ಲ ಸಂಪರ್ಕ ರಸ್ತೆಯ ಪಡಿಬಾಗಿಲು ಪ್ರದೇಶದಲ್ಲಿ ಭಾನುವಾರ ಬೆಳಿಗ್ಗೆ ನಡೆದಿದೆ.

 

ಮಾಹಿತಿಯ ಪ್ರಕಾರ, ರಸ್ತೆ ಬದಿಯಲ್ಲಿ ನಿಂತಿದ್ದ ಒಣಗಿದ ಮರವು ಬೆಳಿಗ್ಗೆ ಇದ್ದಕ್ಕಿದ್ದಂತೆ ಕುಸಿದು ಮೊದಲು ಸಮೀಪದ ವಿದ್ಯುತ್ ಕಂಬಕ್ಕೆ ಅಪ್ಪಳಿಸಿದೆ. ಮರದ ಭಾರವನ್ನು ತಡೆಯಲಾರದೆ ವಿದ್ಯುತ್ ಕಂಬ ಮುರಿದು ಬಿದ್ದಿದ್ದು, ಮರ ಮತ್ತು ಕಂಬ ಎರಡೂ ಒಂದೇ ವೇಳೆ ರಸ್ತೆಯಲ್ಲಿ ವಿಟ್ಲ ಕಡೆಗೆ ಸಾಗುತ್ತಿದ್ದ ಮಾರುತಿ ಸ್ವಿಫ್ಟ್ ಕಾರಿನ ಮೇಲೆ ಬಿದ್ದಿವೆ.

 

ಅಪಘಾತದ ಪರಿಣಾಮ ಕಾರಿನ ಮುಂಭಾಗ ಸಂಪೂರ್ಣವಾಗಿ ಜಖಂಗೊಂಡಿದೆ. ಆದರೆ ಕಾರಿನಲ್ಲಿದ್ದ ವಿಟ್ಲ ಮೂಲದ ದಂಪತಿ ಅದೃಷ್ಟವಶಾತ್ ಯಾವುದೇ ಗಂಭೀರ ಗಾಯಗಳಿಲ್ಲದೆ ಸುರಕ್ಷಿತರಾಗಿ ಪಾರಾಗಿದ್ದಾರೆ.

 

ಘಟನೆಯ ಮಾಹಿತಿ ತಿಳಿದು ವಿಟ್ಲ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇನ್ನು ವಿದ್ಯುತ್ ಕಂಬ ಮುರಿದು ಬಿದ್ದಿರುವುದರಿಂದ ಆ ಭಾಗದಲ್ಲಿ ವಿದ್ಯುತ್ ಸರಬರಾಜು ಸ್ಥಗಿತಗೊಂಡಿದೆ. ಮೆಸ್ಕಾಂ ಸಿಬ್ಬಂದಿಗೆ ಮಾಹಿತಿ ನೀಡಲಾಗಿದ್ದು, ಮರ ಮತ್ತು ಕಂಬ ತೆರವುಗೊಳಿಸುವ ಕಾರ್ಯ ಮುಂದುವರಿದಿದೆ.