21 September 2026 |

ಬಿ.ಸಿ.ರೋಡು–ಮಂಗಳೂರು ಮಾರ್ಗದಲ್ಲಿ ಬಸ್ ಕೊರತೆ: ಅಪಾಯದ ನಡುವೆ ವಿದ್ಯಾರ್ಥಿಗಳ ಪ್ರಯಾಣ

  • 30 Jun 2026 12:55:28 PM

ಬಂಟ್ವಾಳ: ಬಿ.ಸಿ.ರೋಡಿನಿಂದ ಮಂಗಳೂರಿನ ವಿವಿಧ ಕಾಲೇಜುಗಳಿಗೆ ತೆರಳುವ ವಿದ್ಯಾರ್ಥಿಗಳು ಸಮರ್ಪಕ ಬಸ್ ವ್ಯವಸ್ಥೆಯ ಕೊರತೆಯಿಂದ ಸಂಕಷ್ಟ ಅನುಭವಿಸುತ್ತಿದ್ದಾರೆ. ವಿಶೇಷವಾಗಿ ಬೆಳಿಗ್ಗೆ ಕಾಲೇಜಿಗೆ ತೆರಳುವ ಸಮಯ ಹಾಗೂ ಸಂಜೆ ಮರಳುವ ವೇಳೆ ಬಸ್‌ಗಳಲ್ಲಿ ಅತಿಯಾದ ಜನಸಂದಣಿ ಉಂಟಾಗುತ್ತಿದ್ದು, ಅನೇಕ ವಿದ್ಯಾರ್ಥಿಗಳು ಮೆಟ್ಟಿಲುಗಳಲ್ಲಿ ನಿಂತೇ ಪ್ರಯಾಣಿಸಬೇಕಾದ ಅನಿವಾರ್ಯತೆ ಎದುರಿಸುತ್ತಿದ್ದಾರೆ.

 

ಕಾಲೇಜಿಗೆ ಸಮಯಕ್ಕೆ ತಲುಪಬೇಕಾದ ಒತ್ತಡದ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು ಅಪಾಯವನ್ನು ಲೆಕ್ಕಿಸದೆ ಪ್ರಯಾಣಿಸುತ್ತಿದ್ದು, ಇದು ಸುರಕ್ಷತೆಯ ದೃಷ್ಟಿಯಿಂದ ಆತಂಕಕಾರಿ ಬೆಳವಣಿಗೆಯಾಗಿದೆ. ಈ ಸಮಸ್ಯೆಯ ಬಗ್ಗೆ ಹಲವು ಬಾರಿ ಸಂಬಂಧಿತ ಅಧಿಕಾರಿಗಳ ಗಮನಕ್ಕೆ ತರಲಾಗಿದ್ದರೂ, ಇದುವರೆಗೆ ಯಾವುದೇ ಪರಿಣಾಮಕಾರಿ ಕ್ರಮ ಕೈಗೊಳ್ಳಲಾಗಿಲ್ಲ ಎಂದು ವಿದ್ಯಾರ್ಥಿಗಳು ಆರೋಪಿಸಿದ್ದಾರೆ.

 

ರಾಜ್ಯ ಸರ್ಕಾರದ ಶಕ್ತಿ ಯೋಜನೆ ಹಾಗೂ ವಿದ್ಯಾರ್ಥಿಗಳ ಉಚಿತ ಬಸ್ ಪಾಸ್ ಯೋಜನೆಗಳಿಂದ ಸಾರ್ವಜನಿಕರಿಗೆ ಮತ್ತು ವಿದ್ಯಾರ್ಥಿಗಳಿಗೆ ಅನುಕೂಲವಾಗಿದ್ದರೂ, ಪ್ರಯಾಣಿಕರ ಸಂಖ್ಯೆಗೆ ತಕ್ಕಂತೆ ಹೆಚ್ಚುವರಿ ಬಸ್‌ಗಳನ್ನು ಒದಗಿಸದಿರುವುದು ಸಮಸ್ಯೆಯನ್ನು ಮತ್ತಷ್ಟು ಗಂಭೀರಗೊಳಿಸಿದೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.

 

ಹೀಗಾಗಿ ವಿದ್ಯಾರ್ಥಿಗಳ ಸುರಕ್ಷತೆ ಹಾಗೂ ಸುಗಮ ಸಂಚಾರದ ಹಿತದೃಷ್ಟಿಯಿಂದ ಬಿ.ಸಿ.ರೋಡು–ಮಂಗಳೂರು ಮಾರ್ಗದಲ್ಲಿ ಬೆಳಿಗ್ಗೆ ಮತ್ತು ಸಂಜೆ ವೇಳೆಯಲ್ಲಿ ಹೆಚ್ಚುವರಿ ಬಸ್‌ಗಳನ್ನು ಓಡಿಸುವ ಮೂಲಕ ಸಮಸ್ಯೆಗೆ ಶೀಘ್ರ ಪರಿಹಾರ ಕಲ್ಪಿಸಬೇಕು ಎಂದು ವಿದ್ಯಾರ್ಥಿಗಳು, ಪೋಷಕರು ಹಾಗೂ ಸಾರ್ವಜನಿಕರು ಆಗ್ರಹಿಸಿದ್ದಾರೆ.