ಪುತ್ತೂರು: ಮಾಣಿ–ಮೈಸೂರು ರಾಷ್ಟ್ರೀಯ ಹೆದ್ದಾರಿ (NH-275)ಯನ್ನು ಚತುಷ್ಪಥ ರಸ್ತೆಯಾಗಿ ಅಭಿವೃದ್ಧಿಪಡಿಸುವ ಯೋಜನೆಯ ವಿವರವಾದ ಯೋಜನಾ ವರದಿ (DPR) ರಾಜ್ಯ ಸರ್ಕಾರದ ಅನುದಾನದಲ್ಲಿ ಸಿದ್ಧಗೊಂಡಿದ್ದು, ಶೀಘ್ರದಲ್ಲೇ ಕೇಂದ್ರ ಸರ್ಕಾರದ ಅನುಮತಿಗಾಗಿ ಕಳುಹಿಸುವ ನಿರೀಕ್ಷೆಯಿದೆ.
ಈ ಯೋಜನೆ ಜಾರಿಯಾದರೆ ಪುತ್ತೂರು ಸೇರಿದಂತೆ ದಕ್ಷಿಣ ಕನ್ನಡ ಮತ್ತು ಕೊಡಗು ಭಾಗಗಳಿಗೆ ಉತ್ತಮ ರಸ್ತೆ ಸಂಪರ್ಕ ದೊರೆಯಲಿದ್ದು, ಮಂಗಳೂರು–ಮೈಸೂರು ನಡುವಿನ ಸಂಚಾರ ಮತ್ತಷ್ಟು ಸುಗಮವಾಗಲಿದೆ. ವ್ಯಾಪಾರ, ಪ್ರವಾಸೋದ್ಯಮ ಹಾಗೂ ಸರಕು ಸಾಗಣೆಯಲ್ಲಿಯೂ ಅನುಕೂಲವಾಗಲಿದೆ ಎನ್ನಲಾಗಿದೆ.
ಇದರ ಜೊತೆಗೆ, ಮಾಣಿಯಲ್ಲಿರುವ ಪ್ರಸ್ತುತ ರಸ್ತೆ ಮತ್ತು ಅಂಡರ್‌ಪಾಸ್‌ನಲ್ಲಿ ದೊಡ್ಡ ಲಾರಿಗಳು ಹಾಗೂ ಕಂಟೈನರ್ ವಾಹನಗಳ ಸಂಚಾರಕ್ಕೆ ಎದುರಾಗುತ್ತಿರುವ ಸಮಸ್ಯೆಗಳನ್ನು ಪರಿಹರಿಸುವ ಅಗತ್ಯವೂ ಚರ್ಚೆಯಲ್ಲಿದೆ. ಇದಕ್ಕಾಗಿ ಮಾಣಿಯಿಂದ ಸುಮಾರು ಒಂದು ಕಿಲೋಮೀಟರ್ ದೂರದಲ್ಲಿ ಹೊಸ ವೃತ್ತ (ಸರ್ಕಲ್) ನಿರ್ಮಿಸಿ ಅಲ್ಲಿಂದ ಹೆದ್ದಾರಿಗೆ ಸಂಪರ್ಕ ಕಲ್ಪಿಸುವ ಪ್ರಸ್ತಾವನೆಯೂ ಪರಿಗಣನೆಯಲ್ಲಿದೆ.
ಈ ಕುರಿತು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದೊಂದಿಗೆ ಸ್ಥಳೀಯ ಜನಪ್ರತಿನಿಧಿಗಳು ಚರ್ಚೆ ನಡೆಸಿದ್ದು, ಯೋಜನೆಯನ್ನು ಶೀಘ್ರ ಜಾರಿಗೆ ತರಲು ಪ್ರಯತ್ನಗಳು ನಡೆಯುತ್ತಿವೆ ಎಂದು ತಿಳಿದುಬಂದಿದೆ.
ಈ ಯೋಜನೆಯನ್ನು ಮುಂದುವರಿಸಲು ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಹಾಗೂ ದಕ್ಷಿಣ ಕನ್ನಡ ಸಂಸದ ಕ್ಯಾ. ಬ್ರಿಜೇಶ್ ಚೌಟ ಒಗ್ಗಟ್ಟಾಗಿ ಕಾರ್ಯನಿರ್ವಹಿಸಲಿದ್ದು, ಅಭಿವೃದ್ಧಿ ವಿಚಾರದಲ್ಲಿ ರಾಜಕೀಯಕ್ಕೆ ಅವಕಾಶ ನೀಡದೆ ಯೋಜನೆಯನ್ನು ಸಾಕಾರಗೊಳಿಸಲು ಪ್ರಯತ್ನಿಸಲಾಗುವುದು ಎಂದು ಶಾಸಕ ಅಶೋಕ್ ರೈ ಮಾಧ್ಯಮಗಳಿಗೆ ತಿಳಿಸಿದ್ದಾರೆ.





