ಬೆಳ್ತಂಗಡಿ: ತಾಲೂಕಿನ ಗುರುವಾಯನಕೆರೆ ಸಮೀಪ 27 ವರ್ಷದ ಯುವಕನೊಬ್ಬನ ಮೃತದೇಹ ಪತ್ತೆಯಾಗಿರುವ ಘಟನೆ ಬೆಳಕಿಗೆ ಬಂದಿದ್ದು, ಸಾವಿನ ಕುರಿತು ಅನುಮಾನಗಳು ವ್ಯಕ್ತವಾಗಿವೆ. ಈ ಹಿನ್ನೆಲೆಯಲ್ಲಿ ಪೊಲೀಸರು ವಿವಿಧ ಆಯಾಮಗಳಲ್ಲಿ ತನಿಖೆ ಆರಂಭಿಸಿದ್ದಾರೆ.
ಕುವೆಟ್ಟು ಗ್ರಾಮದ ಶಕ್ತಿನಗರದ ಬಳಿಯಿರುವ ಯನೋಪೊಯೋ ಖಾಸಗಿ ವಿದ್ಯುತ್ ಸಬ್‌ಸ್ಟೇಷನ್ ಆವರಣದಲ್ಲಿ ಯುವಕನ ಶವ ಪತ್ತೆಯಾಗಿದೆ. ಮೃತ ವ್ಯಕ್ತಿಯನ್ನು ತಣ್ಣೀರುಪಂತ ಗ್ರಾಮದ ಕಲ್ಲೇರಿ ಜನತಾ ಕಾಲೋನಿಯ ನಿವಾಸಿ ಶರೀಫ್ ಕೆ. ಅವರ ಪುತ್ರ ಮುಸ್ತಾಕ್ (27) ಎಂದು ಗುರುತಿಸಲಾಗಿದೆ.
ಮುಸ್ತಾಕ್ ಅವರು ವೃತ್ತಿಯಿಂದ ಲಾರಿ ಚಾಲಕರಾಗಿದ್ದರು. ತಮ್ಮ ಮಗನ ಸಾವಿನ ಹಿಂದೆ ದುಷ್ಕೃತ್ಯ ಇರಬಹುದೆಂದು ಮೃತನ ತಂದೆ ಶರೀಫ್ ಶಂಕೆ ವ್ಯಕ್ತಪಡಿಸಿದ್ದು, ಘಟನೆಯ ಕುರಿತು ಸಮಗ್ರ ತನಿಖೆ ನಡೆಸುವಂತೆ ಪೊಲೀಸರನ್ನು ಆಗ್ರಹಿಸಿದ್ದಾರೆ.
ಮಾಹಿತಿ ತಿಳಿಯುತ್ತಿದ್ದಂತೆ ಬೆಳ್ತಂಗಡಿ ಪೊಲೀಸ್ ಠಾಣೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಬಳಿಕ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಲಾಗಿದೆ.
ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಸಾವಿನ ನಿಖರ ಕಾರಣ ಪತ್ತೆಹಚ್ಚಲು ತನಿಖೆ ಮುಂದುವರಿಸಿದ್ದಾರೆ. ಮರಣೋತ್ತರ ಪರೀಕ್ಷೆ ಹಾಗೂ ಪ್ರಾಥಮಿಕ ತನಿಖೆಯ ವರದಿ ಬಳಿಕವೇ ಇದು ಕೊಲೆ ಪ್ರಕರಣವೇ ಅಥವಾ ಬೇರೆ ಕಾರಣದಿಂದ ಸಂಭವಿಸಿದ ಸಾವೇ ಎಂಬುದು ಸ್ಪಷ್ಟವಾಗಲಿದೆ.





