17 July 2026 |

ಶಾಲೆಗೆ ಮಗು ತಲುಪಿದ ತಕ್ಷಣ ಪೋಷಕರ ಮೊಬೈಲ್‌ಗೆ ಸಂದೇಶ! ಪುತ್ತೂರಿನ ವಿದ್ಯಾರ್ಥಿಯ ಅದ್ಭುತ ಆವಿಷ್ಕಾರಕ್ಕೆ ರಾಷ್ಟ್ರೀಯ ಮಟ್ಟದ ಗೌರವ

  • 16 Jul 2026 03:32:04 PM

ಪುತ್ತೂರು: ಮಕ್ಕಳು ಶಾಲೆಗೆ ಸುರಕ್ಷಿತವಾಗಿ ತಲುಪಿದ್ದಾರೆಯೇ ಎಂಬ ಆತಂಕ ಬಹುತೇಕ ಎಲ್ಲ ಪೋಷಕರಲ್ಲೂ ಇರುತ್ತದೆ. ಇದೇ ಸಮಸ್ಯೆಗೆ ತಂತ್ರಜ್ಞಾನದ ಮೂಲಕ ಪರಿಹಾರ ಕಂಡುಹಿಡಿದಿರುವವರು ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಕೊಂಬೆಟ್ಟು ಸರ್ಕಾರಿ ಪದವಿಪೂರ್ವ ಕಾಲೇಜಿನ ಪ್ರತಿಭಾವಂತ ವಿದ್ಯಾರ್ಥಿ ಅರುಣ್ ಕುಮಾರ್.

 

ಅರುಣ್ ಕುಮಾರ್ ಅವರು ಶಾಲೆಗೆ ಬರುವ ವಿದ್ಯಾರ್ಥಿಗಳು ಬಯೋಮೆಟ್ರಿಕ್ ಯಂತ್ರದಲ್ಲಿ ಹಾಜರಾತಿ ದಾಖಲಿಸಿದ ತಕ್ಷಣವೇ ಅವರ ಪೋಷಕರ ಮೊಬೈಲ್‌ಗೆ ಸ್ವಯಂಚಾಲಿತವಾಗಿ ಸಂದೇಶ ರವಾನೆಯಾಗುವ ವಿಶೇಷ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಿದ್ದಾರೆ. ಈ ತಂತ್ರಜ್ಞಾನದಿಂದ ಮಕ್ಕಳು ಶಾಲೆಗೆ ತಲುಪಿರುವ ಮಾಹಿತಿ ಪೋಷಕರಿಗೆ ಕ್ಷಣಾರ್ಧದಲ್ಲೇ ಲಭ್ಯವಾಗುತ್ತದೆ.

 

ವಿದ್ಯಾರ್ಥಿಯ ಈ ವಿನೂತನ ಆವಿಷ್ಕಾರಕ್ಕೆ ರಾಜ್ಯ ಮತ್ತು ರಾಷ್ಟ್ರೀಯ ಮಟ್ಟದಲ್ಲಿ ಮೆಚ್ಚುಗೆ ವ್ಯಕ್ತವಾಗಿದ್ದು, ಹಲವು ಪ್ರತಿಷ್ಠಿತ ಪ್ರಶಸ್ತಿಗಳು ದೊರೆತಿವೆ. ಗ್ರಾಮೀಣ ಪ್ರದೇಶದ ಸರ್ಕಾರಿ ಕಾಲೇಜಿನ ವಿದ್ಯಾರ್ಥಿಯೊಬ್ಬರು ಸಮಾಜಕ್ಕೆ ಉಪಯುಕ್ತವಾಗುವ ತಂತ್ರಜ್ಞಾನವನ್ನು ರೂಪಿಸಿರುವುದು ಕಾಲೇಜು ಹಾಗೂ ದಕ್ಷಿಣ ಕನ್ನಡ ಜಿಲ್ಲೆಗೆ ಹೆಮ್ಮೆಯ ವಿಷಯವಾಗಿದೆ.