ಬಂಟ್ವಾಳ: ಇಡೀ ದಕ್ಷಿಣ ಕನ್ನಡ ಜಿಲ್ಲೆ ಹಾಗೂ ರಾಜ್ಯವನ್ನೇ ಬೆಚ್ಚಿಬೀಳಿಸಿದ ಬಿ.ಸಿ.ರೋಡ್ ಯುವತಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹೊಸ ಮಾಹಿತಿ ಹೊರಬಿದ್ದಿದೆ.
ಖಾಸಗಿ ಟಿವಿ ವಾಹಿನಿಗೆ ಪ್ರತಿಕ್ರಿಯೆ ನೀಡಿರುವ ಮೃತ ಲಾವಣ್ಯ ಅವರ ಸಂಬಂಧಿಕ ನಿತಿನ್, ತಮ್ಮ ಹೇಳಿಕೆಯಲ್ಲಿ ಹಲವು ಪ್ರಮುಖ ಸಂಗತಿಗಳನ್ನು ಹಂಚಿಕೊಂಡಿದ್ದಾರೆ. ಅವರ ಹೇಳಿಕೆಯ ಪ್ರಕಾರ, ಲಾವಣ್ಯ ಮತ್ತು ಶಂಕಿತ ಯುವಕ ಸುಮಾರು ನಾಲ್ಕು ವರ್ಷಗಳ ಹಿಂದೆಯೇ ದೂರವಾಗಿದ್ದು, ಬಳಿಕ ಇಬ್ಬರ ನಡುವೆ ಯಾವುದೇ ಸಂಪರ್ಕ ಇರಲಿಲ್ಲ. ಈ ಬೆಳವಣಿಗೆಯ ಬಗ್ಗೆ ಕುಟುಂಬಕ್ಕೂ ಮಾಹಿತಿ ಇರಲಿಲ್ಲ ಎಂದು ಅವರು ತಿಳಿಸಿದ್ದಾರೆ.
ಯುವಕ ಲಾವಣ್ಯ ಅವರನ್ನು ಹಿಂಬಾಲಿಸುತ್ತಿದ್ದ ವಿಚಾರವೂ ಕುಟುಂಬದ ಗಮನಕ್ಕೆ ಬಂದಿರಲಿಲ್ಲ. ಇಂತಹ ದುರ್ಘಟನೆ ನಡೆಯಬಹುದು ಎಂದು ಯಾರೂ ಊಹಿಸಿರಲಿಲ್ಲ ಎಂದು ಅವರು ಹೇಳಿದ್ದಾರೆ.
“ಲಾವಣ್ಯ ನಮ್ಮೊಂದಿಗೆ ತುಂಬಾ ಆತ್ಮೀಯವಾಗಿದ್ದರು. ತಮ್ಮ ಜೀವನದ ಬಹುತೇಕ ಎಲ್ಲ ವಿಚಾರಗಳನ್ನೂ ನಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದರು,” ಎಂದು ನಿತಿನ್ ತಿಳಿಸಿದ್ದಾರೆ.
ಇದೇ ವೇಳೆ, ಮೂಲಗಳ ಪ್ರಕಾರ, ಘಟನೆ ನಡೆಯುವ ಕೆಲವೇ ಕ್ಷಣಗಳ ಮೊದಲು ಬಸ್‌ನ ಹಿಂದಿನ ಸೀಟಿನಲ್ಲಿ ಶಂಕಿತ ಯುವಕ ಕುಳಿತಿರುವುದನ್ನು ಗಮನಿಸಿದ ಲಾವಣ್ಯ, ತಮ್ಮ ಸಂಬಂಧಿಕರಿಗೆ ಕರೆ ಮಾಡಿ ಈ ಬಗ್ಗೆ ಮಾಹಿತಿ ನೀಡಿದ್ದರು ಎನ್ನಲಾಗಿದೆ.
ಪ್ರಕರಣದ ಕುರಿತು ಪೊಲೀಸರು ತನಿಖೆ ಮುಂದುವರಿಸಿದ್ದು, ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.





