ಬಂಟ್ವಾಳ: ತಾಲೂಕಿನ ಕುರಿಯಾಳ ಗ್ರಾಮದ ದಾಸೊಟ್ಟು-ಕುಕ್ಕಾಜೆ ಪ್ರದೇಶದಲ್ಲಿ ಸೋಮವಾರ ತಡರಾತ್ರಿ ಸಂಭವಿಸಿದ ಬೆಂಕಿ ಅವಘಡದಲ್ಲಿ ನಿವಾಸಿ ರಮೇಶ್ ಪೂಜಾರಿ ಅವರ ಮನೆಯ ಹಿಂಭಾಗದಲ್ಲಿದ್ದ ಬಚ್ಚಲು ಮನೆ ಹಾಗೂ ಹಸುವಿನ ಕೊಟ್ಟಿಗೆ ಸಂಪೂರ್ಣವಾಗಿ ಬೆಂಕಿಗಾಹುತಿಯಾಗಿದೆ. ಈ ಘಟನೆಯಿಂದ ನಾಲ್ಕು ಲಕ್ಷ ರೂಪಾಯಿಗೂ ಅಧಿಕ ಮೌಲ್ಯದ ಆಸ್ತಿ ನಷ್ಟ ಉಂಟಾಗಿದೆ ಎಂದು ತಿಳಿದುಬಂದಿದೆ.
ರಾತ್ರಿ ಸುಮಾರು 1 ಗಂಟೆ ವೇಳೆಗೆ ಬೆಂಕಿ ಕಾಣಿಸಿಕೊಂಡಿದ್ದು, ಸ್ಥಳೀಯರು ತಕ್ಷಣ ಕಾರ್ಯಪ್ರವೃತ್ತರಾಗಿ ಕೊಟ್ಟಿಗೆಯಲ್ಲಿದ್ದ ದನಗಳನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಿದರು. ಇದರಿಂದ ಯಾವುದೇ ಜಾನುವಾರುಗಳಿಗೆ ಹಾನಿಯಾಗಿಲ್ಲ.
ಘಟನೆಯ ಮಾಹಿತಿ ದೊರಕುತ್ತಿದ್ದಂತೆ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಸ್ಥಳೀಯರ ಸಹಕಾರದೊಂದಿಗೆ ಹಲವು ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿದರು. ಪರಿಣಾಮವಾಗಿ ಬೆಂಕಿಯನ್ನು ನಿಯಂತ್ರಣಕ್ಕೆ ತಂದು ಸುತ್ತಮುತ್ತಲಿನ ಪ್ರದೇಶಗಳಿಗೆ ಹರಡುವುದನ್ನು ತಡೆಯಲಾಯಿತು.
ಘಟನಾ ಸ್ಥಳಕ್ಕೆ ಗ್ರಾಮ ಕರಣಿಕರ ಸಹಾಯಕರು ಹಾಗೂ ಮಾಜಿ ಪಂಚಾಯತ್ ಸದಸ್ಯರು ಭೇಟಿ ನೀಡಿ ಪರಿಸ್ಥಿತಿಯನ್ನು ಪರಿಶೀಲಿಸಿದರು. ಬೆಂಕಿ ಕಾಣಿಸಿಕೊಳ್ಳಲು ಕಾರಣವೇನು ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಸಂಬಂಧಪಟ್ಟ ಅಧಿಕಾರಿಗಳು ಈ ಕುರಿತು ತನಿಖೆ ನಡೆಸುತ್ತಿದ್ದಾರೆ.





