ಉಡುಪಿ: ಶಿರ್ವ-ಕಟಪಾಡಿ ರಾಜ್ಯ ಹೆದ್ದಾರಿಯ ಬಂಟಕಲ್ ಸಮೀಪದ ಬಿ.ಸಿ.ರಸ್ತೆ ಬಳಿ ಭಾನುವಾರ ಸಂಭವಿಸಿದ ರಸ್ತೆ ಅಪಘಾತದಲ್ಲಿ ಮಹೀಂದ್ರಾ ಥಾರ್ ಎಸ್‌ಯುವಿ ವಾಹನ ಚರಂಡಿಗೆ ಉರುಳಿ ಬಿದ್ದ ಪರಿಣಾಮ ಚಾಲಕ ಸೇರಿದಂತೆ ನಾಲ್ವರು ಗಾಯಗೊಂಡಿದ್ದಾರೆ.
ಅಪಘಾತದಲ್ಲಿ ಶಿರ್ವ ನಿವಾಸಿ ಬಾಲಕೃಷ್ಣ (21) ಹಾಗೂ ಇಬ್ಬರು ಯುವತಿಯರು ಸೇರಿದಂತೆ ಇನ್ನೂ ಮೂವರು ಸಹಪ್ರಯಾಣಿಕರು ಗಾಯಗೊಂಡಿದ್ದಾರೆ. ಗಾಯಾಳುಗಳಲ್ಲಿ ಮೂವರ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದುಬಂದಿದ್ದು, ಎಲ್ಲರನ್ನೂ ಹೆಚ್ಚಿನ ಚಿಕಿತ್ಸೆಗೆ ಉಡುಪಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಲಭ್ಯ ಮಾಹಿತಿಯಂತೆ, ವಾಹನವು ಚಾಲಕನ ನಿಯಂತ್ರಣ ಕಳೆದುಕೊಂಡು ರಸ್ತೆ ಬದಿಯ ಚರಂಡಿಗೆ ಬಿದ್ದಿದೆ. ಘಟನೆ ನಡೆದ ತಕ್ಷಣ ಸ್ಥಳೀಯರು ಸ್ಥಳಕ್ಕೆ ಆಗಮಿಸಿ ವಾಹನದಲ್ಲಿದ್ದವರನ್ನು ಹೊರತೆಗೆದು ರಕ್ಷಣಾ ಕಾರ್ಯದಲ್ಲಿ ನೆರವಾದರು.
ಇದೇ ವೇಳೆ ಕುಂದಾಪುರದತ್ತ ತೆರಳುತ್ತಿದ್ದ ಸೋದೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಆಡಳಿತಾಧಿಕಾರಿ ಜಯಶೀಲ್ ಹೆಗ್ಡೆ ಅವರು ಗಾಯಾಳುಗಳ ನೆರವಿಗೆ ಧಾವಿಸಿದರು. ಬಂಟಕಲ್ ನಾಗರಿಕ ಸೇವಾ ಸಮಿತಿಯ ಅಧ್ಯಕ್ಷ ಕೆ.ಆರ್. ಪಾಟ್ಕರ್ ಅವರ ಸಹಕಾರದೊಂದಿಗೆ ಇಬ್ಬರು ಗಾಯಾಳುಗಳನ್ನು ತಮ್ಮ ಕಾರಿನಲ್ಲೇ ಉಡುಪಿಯ ಟಿ.ಎಂ.ಎ. ಪೈ ಆಸ್ಪತ್ರೆಗೆ ಸಾಗಿಸಿ ಚಿಕಿತ್ಸೆ ದೊರಕುವಂತೆ ವ್ಯವಸ್ಥೆ ಮಾಡಿದರು.





