ಸುಳ್ಯ: ಸಂಪಾಜೆ ಸಮೀಪದ ಕಲ್ಲುಗುಂಡಿ ಕಡೆಪಾಲದಲ್ಲಿ ನಡೆದ ಯುವ ವಿವಾಹಿತೆ ಫಾತಿಮತ್ ನಿಶಾನಾ (22) ಅವರ ಸಾವಿನ ಪ್ರಕರಣ ಮಹತ್ವದ ತಿರುವು ಪಡೆದುಕೊಂಡಿದೆ. ಆರಂಭದಲ್ಲಿ ಆತ್ಮಹತ್ಯೆ ಎಂದು ಹೇಳಲಾಗುತ್ತಿದ್ದ ಘಟನೆ ಇದೀಗ ಕೊಲೆ ಪ್ರಕರಣವಾಗಿ ಪರಿಗಣಿಸಲ್ಪಟ್ಟಿದ್ದು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ನಿರ್ದೇಶನದಂತೆ ಸುಳ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮೃತ ನಿಶಾನಾ ಮೂಲತಃ ಪುತ್ತೂರು ತಾಲೂಕಿನ ಕುಂಬ್ರ ಸಾರೆಪುಣಿ ನಿವಾಸಿಯಾಗಿದ್ದು, ಪ್ರಸ್ತುತ ಕೆದಂಬಾಡಿಯ ಜುಬೈದಾ (43) ಅವರ ಪುತ್ರಿಯಾಗಿದ್ದಾರೆ. ನಾಲ್ಕು ವರ್ಷಗಳ ಹಿಂದೆ ದೇವರಕೊಲ್ಲಿ ಮೂಲದ ಅನ್ಸಾರ್ ಅವರನ್ನು ವಿವಾಹವಾಗಿದ್ದ ಅವರು, ಕಲ್ಲುಗುಂಡಿ ಕಡೆಪಾಲದಲ್ಲಿ ವಾಸಿಸುತ್ತಿದ್ದರು. ಅನ್ಸಾರ್ ಬೆಂಗಳೂರಿನಲ್ಲಿ ಟ್ಯಾಕ್ಸಿ ಚಾಲಕರಾಗಿ ಕೆಲಸ ಮಾಡುತ್ತಿದ್ದು, ದಂಪತಿಗೆ ಎರಡು ವರ್ಷದ ಗಂಡು ಮಗು ಇದೆ.
ಜುಲೈ 18ರಂದು ನಿಶಾನಾ ಸ್ನಾನಗೃಹದ ಶವರ್ ಪೈಪ್‌ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಗಂಡನ ಮನೆಯವರು ತಿಳಿಸಿದ್ದರು. ಆದರೆ ಈ ವಿವರಣೆಯನ್ನು ಆರಂಭದಿಂದಲೇ ನಿಶಾನಾ ಅವರ ತವರು ಮನೆಯವರು ಪ್ರಶ್ನಿಸಿದ್ದರು.
ಸಾಮಾನ್ಯವಾಗಿ ಸ್ನಾನಗೃಹದಲ್ಲಿರುವ ಶವರ್‌ಗೆ ನೇಣು ಬಿಗಿದು ಸಾವನ್ನಪ್ಪುವುದು ಅನುಮಾನಾಸ್ಪದವಾಗಿದ್ದು, ಘಟನೆ ಬಗ್ಗೆ ಹಲವು ಸಂಶಯಗಳು ಮೂಡಿವೆ ಎಂದು ಕುಟುಂಬಸ್ಥರು ಹೇಳಿದ್ದರು. ಅಲ್ಲದೆ, ತವರು ಮನೆಯವರು ಸ್ಥಳಕ್ಕೆ ತಲುಪುವ ಮುನ್ನವೇ ಮೃತದೇಹವನ್ನು ಕೆಳಗಿಳಿಸಿ ಹೊರಗೆ ಮಲಗಿಸಲಾಗಿತ್ತು ಎನ್ನಲಾಗಿದ್ದು, ಇದು ಸಾಕ್ಷ್ಯಗಳನ್ನು ಮರೆಮಾಚುವ ಪ್ರಯತ್ನವಾಗಿರಬಹುದು ಎಂಬ ಆರೋಪವೂ ಕೇಳಿಬಂದಿತ್ತು.
ಇದರ ನಡುವೆ, ಘಟನೆ ನಡೆದ ದಿನ ರಾತ್ರಿ ಸುಮಾರು 9 ಗಂಟೆ ವೇಳೆಗೆ ನಿಶಾನಾ ತಮ್ಮ ತಾಯಿ ಜುಬೈದಾರಿಗೆ ಕರೆ ಮಾಡಿ, ಮಾವ ಅಲವಿ, ಅತ್ತೆ ಆಯಿಷ ಹಾಗೂ ನಾದಿನಿ ಫಸೀಲಾ ಅವರಿಂದ ತಮಗೆ ಮಾನಸಿಕ ಹಾಗೂ ದೈಹಿಕ ಕಿರುಕುಳವಾಗುತ್ತಿದೆ ಎಂದು ಅಳಲು ವ್ಯಕ್ತಪಡಿಸಿದ್ದರೆಂದು ತಿಳಿದುಬಂದಿದೆ.
ಕುಟುಂಬದವರ ಆರೋಪದ ಪ್ರಕಾರ, ದೂರವಾಣಿ ಸಂಭಾಷಣೆಯ ವೇಳೆ ಮಾವ ಅಲವಿ ಫೋನ್ ಪಡೆದು, “ಬೇಗ ಬಂದು ಮಗಳನ್ನು ಕರೆದುಕೊಂಡು ಹೋಗಿ, ಇಲ್ಲದಿದ್ದರೆ ಅವಳನ್ನು ಕೊಲೆ ಮಾಡುತ್ತೇವೆ” ಎಂದು ಬೆದರಿಕೆ ಹಾಕಿದ್ದರು ಎನ್ನಲಾಗಿದೆ. ಈ ಮಾತುಗಳಿಂದ ಆತಂಕಗೊಂಡ ತಾಯಿ ತಕ್ಷಣ ಮಗಳ ಮನೆಗೆ ಹೊರಟಿದ್ದರೂ, ಅಲ್ಲಿಗೆ ತಲುಪುವಷ್ಟರಲ್ಲಿ ನಿಶಾನಾ ಮೃತಪಟ್ಟ ಸ್ಥಿತಿಯಲ್ಲಿ ಕಂಡುಬಂದಿದ್ದರು.
ಈ ಎಲ್ಲಾ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಪ್ರಕರಣವನ್ನು ಇದೀಗ ಕೊಲೆ ಪ್ರಕರಣವಾಗಿ ಪರಿವರ್ತಿಸಿ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.





