21 July 2026 |

10 ಜಿಲ್ಲೆಗಳ ರೋಗಿಗಳ ಭರವಸೆ ವೆನ್ಲಾಕ್‌ ಆಸ್ಪತ್ರೆ: ಐಸಿಯು ಬೆಡ್‌ ಹಾಗೂ ನರ್ಸಿಂಗ್ ಸಿಬ್ಬಂದಿ ಕೊರತೆಯಿಂದ ಹೆಚ್ಚಿದ ಒತ್ತಡ

  • 21 Jul 2026 10:47:01 AM

ಮಂಗಳೂರು: ಕರ್ನಾಟಕದ ಕರಾವಳಿ ಭಾಗ ಹಾಗೂ ಕೇರಳ ಗಡಿಭಾಗದ ಸೇರಿ ಸುಮಾರು 10 ಜಿಲ್ಲೆಗಳ ಸಾವಿರಾರು ಬಡ ಮತ್ತು ಮಧ್ಯಮ ವರ್ಗದ ರೋಗಿಗಳಿಗೆ ಪ್ರಮುಖ ಸರ್ಕಾರಿ ಆರೋಗ್ಯ ಕೇಂದ್ರವಾಗಿರುವ ಮಂಗಳೂರಿನ ವೆನ್ಲಾಕ್ ಆಸ್ಪತ್ರೆ ಇದೀಗ ಹೆಚ್ಚುತ್ತಿರುವ ರೋಗಿಗಳ ಸಂಖ್ಯೆಯಿಂದ ತೀವ್ರ ಒತ್ತಡಕ್ಕೆ ಸಿಲುಕಿದೆ. ವಿಶೇಷವಾಗಿ ಐಸಿಯು ಬೆಡ್‌ಗಳ ಕೊರತೆ ಮತ್ತು ನರ್ಸಿಂಗ್ ಸಿಬ್ಬಂದಿಯ ಅಭಾವ ಆಸ್ಪತ್ರೆಯ ಸೇವಾ ವ್ಯವಸ್ಥೆಗೆ ಸವಾಲಾಗಿ ಪರಿಣಮಿಸಿದೆ.

 

ಪ್ರತಿ ವರ್ಷ 30 ಸಾವಿರಕ್ಕೂ ಹೆಚ್ಚು ರೋಗಿಗಳಿಗೆ ಚಿಕಿತ್ಸೆ ನೀಡುತ್ತಿರುವ ಈ ಆಸ್ಪತ್ರೆಯನ್ನು ಪ್ರಾದೇಶಿಕ ಆಸ್ಪತ್ರೆಯಾಗಿ ಮೇಲ್ದರ್ಜೆಗೇರಿಸುವ ಬೇಡಿಕೆ ಹಲವು ವರ್ಷಗಳಿಂದ ಕೇಳಿಬರುತ್ತಿದ್ದರೂ ಇನ್ನೂ ಅಂತಿಮ ನಿರ್ಧಾರವಾಗಿಲ್ಲ. ಆಸ್ಪತ್ರೆಗೆ ಪ್ರಾದೇಶಿಕ ಆಸ್ಪತ್ರೆಯ ಮಾನ್ಯತೆ ದೊರೆತರೆ ಹೆಚ್ಚುವರಿ ಅನುದಾನ, ಸಿಬ್ಬಂದಿ ಹಾಗೂ ಆಧುನಿಕ ಸೌಲಭ್ಯಗಳು ಲಭ್ಯವಾಗಿ ರೋಗಿಗಳಿಗೆ ಉತ್ತಮ ಸೇವೆ ಒದಗಿಸಲು ಅನುಕೂಲವಾಗಲಿದೆ ಎನ್ನಲಾಗಿದೆ.

 

940 ಹಾಸಿಗೆಗಳ ಸಾಮರ್ಥ್ಯ ಹೊಂದಿರುವ ವೆನ್ಲಾಕ್ ಆಸ್ಪತ್ರೆಯಲ್ಲಿ ಪ್ರಸ್ತುತ 40 ಮೆಡಿಕಲ್ ಐಸಿಯು, 15 ಸರ್ಜಿಕಲ್ ಐಸಿಯು, 10 ಕಾರ್ಡಿಯಾಕ್ ಐಸಿಯು ಮತ್ತು 10 ಪೀಡಿಯಾಟ್ರಿಕ್ ಐಸಿಯು ಸೇರಿ ಒಟ್ಟು 80 ಐಸಿಯು ಬೆಡ್‌ಗಳಿವೆ. ಅತ್ಯಾಧುನಿಕ ವೈದ್ಯಕೀಯ ಸೌಲಭ್ಯಗಳನ್ನು ಹೊಂದಿರುವ ರಾಜ್ಯದ ಪ್ರಮುಖ ಸರ್ಕಾರಿ ಜಿಲ್ಲಾಸ್ಪತ್ರೆಗಳಲ್ಲಿ ಇದೂ ಒಂದಾಗಿದೆ.

 

ದಕ್ಷಿಣ ಕನ್ನಡ ಜಿಲ್ಲೆಯ ಆಸ್ಪತ್ರೆಯಾಗಿದ್ದರೂ ಉಡುಪಿ, ಉತ್ತರ ಕನ್ನಡ, ಶಿವಮೊಗ್ಗ, ಚಿಕ್ಕಮಗಳೂರು, ಕೊಡಗು, ದಾವಣಗೆರೆ, ಹುಬ್ಬಳ್ಳಿ ಸೇರಿದಂತೆ ಕೇರಳದ ಕಾಸರಗೋಡು, ಕಣ್ಣೂರು ಮತ್ತು ಸುತ್ತಮುತ್ತಲಿನ ಪ್ರದೇಶಗಳಿಂದಲೂ ಅನೇಕ ರೋಗಿಗಳು ಚಿಕಿತ್ಸೆಗಾಗಿ ಇಲ್ಲಿಗೆ ಆಗಮಿಸುತ್ತಿದ್ದಾರೆ. ತುರ್ತು ಚಿಕಿತ್ಸೆಗೆ ಬರುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಕಾರಣ ಲಭ್ಯವಿರುವ ಐಸಿಯು ಬೆಡ್‌ಗಳು ಸಾಕಾಗುತ್ತಿಲ್ಲ.

 

2000ರ ಅವಧಿವರೆಗೆ ಆಸ್ಪತ್ರೆಯಲ್ಲಿ ಐಸಿಯು ವ್ಯವಸ್ಥೆಯೇ ಇರಲಿಲ್ಲ. 2002ರಲ್ಲಿ ಮೊದಲ ಎರಡು ಐಸಿಯು ಘಟಕಗಳು ಆರಂಭವಾಗಿದ್ದು, ಬಳಿಕ ಹಂತ ಹಂತವಾಗಿ ವಿಸ್ತರಣೆಗೊಂಡು ಇಂದು 80 ಐಸಿಯು ಬೆಡ್‌ಗಳ ಮಟ್ಟಕ್ಕೆ ತಲುಪಿದೆ.

 

ಮಂಗಳೂರು ವೈದ್ಯಕೀಯ ಸೇವೆಗಳ ಪ್ರಮುಖ ಕೇಂದ್ರವಾಗಿ ಬೆಳೆದಿರುವುದರಿಂದ ಉತ್ತಮ ಚಿಕಿತ್ಸೆಯ ನಿರೀಕ್ಷೆಯೊಂದಿಗೆ ವಿವಿಧ ಜಿಲ್ಲೆಗಳಿಂದ ರೋಗಿಗಳು ವೆನ್ಲಾಕ್‌ಗೆ ಬರುತ್ತಿದ್ದಾರೆ. ಅಪಘಾತಗಳು, ಹೃದಯಾಘಾತ, ಡೆಂಗ್ಯೂ, ಮಲೇರಿಯಾ, ಹಾವು ಕಚ್ಚಿದ ಪ್ರಕರಣಗಳು ಸೇರಿದಂತೆ ತುರ್ತು ಚಿಕಿತ್ಸೆಗೆ ಆಗಮಿಸುವವರ ಸಂಖ್ಯೆ ಹೆಚ್ಚಿರುವ ಕಾರಣ ಹಲವು ಸಂದರ್ಭಗಳಲ್ಲಿ ರೋಗಿಗಳು ಐಸಿಯು ಬೆಡ್ ಖಾಲಿಯಾಗುವವರೆಗೆ ಕಾಯಬೇಕಾದ ಪರಿಸ್ಥಿತಿ ಉಂಟಾಗುತ್ತಿದೆ.

 

ವೆನ್ಲಾಕ್ ಆಸ್ಪತ್ರೆಯ ಮೇಲಿನ ಒತ್ತಡ ಕಡಿಮೆ ಮಾಡಲು ರಾಜ್ಯದ ಇತರ ಜಿಲ್ಲಾಸ್ಪತ್ರೆಗಳನ್ನೂ ಇದೇ ಮಾದರಿಯಲ್ಲಿ ಅಭಿವೃದ್ಧಿಪಡಿಸುವ ಅಗತ್ಯವಿದೆ ಎಂಬ ಅಭಿಪ್ರಾಯ ಜನಪ್ರತಿನಿಧಿಗಳದ್ದು. ವಿವಿಧ ಜಿಲ್ಲೆಗಳಲ್ಲಿ ಉತ್ತಮ ವೈದ್ಯಕೀಯ ಸೌಲಭ್ಯಗಳನ್ನು ಕಲ್ಪಿಸಿದರೆ ಮಂಗಳೂರಿನ ಆಸ್ಪತ್ರೆಯ ಮೇಲಿನ ಭಾರ ಕಡಿಮೆಯಾಗಲಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

 

ಆಸ್ಪತ್ರೆ ಮೂಲಗಳ ಪ್ರಕಾರ, ವೆನ್ಲಾಕ್‌ಗೆ ನೆರೆಯ ಜಿಲ್ಲೆಗಳಷ್ಟೇ ಅಲ್ಲದೆ ರಾಜ್ಯದ ವಿವಿಧ ಭಾಗಗಳಿಂದಲೂ ರೋಗಿಗಳು ಚಿಕಿತ್ಸೆಗೆ ಆಗಮಿಸುತ್ತಿದ್ದಾರೆ. ಕೇರಳದಿಂದಲೂ ಗಣನೀಯ ಸಂಖ್ಯೆಯಲ್ಲಿ ರೋಗಿಗಳು ಬರುತ್ತಿದ್ದಾರೆ. ಆಸ್ಪತ್ರೆಯನ್ನು ಪ್ರಾದೇಶಿಕ ಆಸ್ಪತ್ರೆಯಾಗಿ ಘೋಷಿಸಿದರೆ ಹಾಸಿಗೆಗಳ ಸಂಖ್ಯೆ, ಐಸಿಯು ಸಾಮರ್ಥ್ಯ ಮತ್ತು ಅತ್ಯಾಧುನಿಕ ವೈದ್ಯಕೀಯ ಉಪಕರಣಗಳ ಲಭ್ಯತೆ ಹೆಚ್ಚುವ ಸಾಧ್ಯತೆ ಇದೆ. ಈ ಸಂಬಂಧ ಅಂತಿಮ ತೀರ್ಮಾನವನ್ನು ಸರ್ಕಾರ ಕೈಗೊಳ್ಳಬೇಕಿದೆ.