21 July 2026 |

ಮಂತ್ರಾಲಯದ ಬಳಿ ಭೀಕರ ರಸ್ತೆ ಅಪಘಾತ: ಮಂಗಳೂರು ಹಾಪ್‌ಕಾಮ್ಸ್‌ ಜನರಲ್ ಮ್ಯಾನೇಜರ್ ರವಿ ಶೆಟ್ಟಿ ದುರ್ಮರಣ

  • 21 Jul 2026 11:04:35 AM

ಮಂಗಳೂರು: ಮಂಗಳೂರು ಹಾಪ್‌ಕಾಮ್ಸ್‌ನ ಜನರಲ್ ಮ್ಯಾನೇಜರ್ ಹಾಗೂ ಯಕ್ಷ ಧ್ರುವ ಫೌಂಡೇಶನ್‌ನ ಕಾರ್ಯದರ್ಶಿಯಾಗಿದ್ದ ರವಿ ಶೆಟ್ಟಿ (43) ಅವರು ಆಂಧ್ರ ಪ್ರದೇಶದ ಕರ್ನೂಲು ಜಿಲ್ಲೆಯ ಮಂತ್ರಾಲಯ ಸಮೀಪ ಮಂಗಳವಾರ ಮುಂಜಾನೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದಾರೆ.

 

ರವಿ ಶೆಟ್ಟಿ ಅವರು ಸ್ನೇಹಿತರೊಂದಿಗೆ ಶ್ರೀ ರಾಘವೇಂದ್ರ ಸ್ವಾಮಿ ದೇವಸ್ಥಾನದ ದರ್ಶನಕ್ಕಾಗಿ ಮಂತ್ರಾಲಯಕ್ಕೆ ತೆರಳಿದ್ದ ವೇಳೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಕಾರು ನಿಯಂತ್ರಣ ತಪ್ಪಿ ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.

 

ಅಪಘಾತದಲ್ಲಿ ಮಂಗಳೂರಿನ ಪ್ರದೀಪ್ ಆಳ್ವ, ಪುರುಷೋತ್ತಮ ಭಂಡಾರಿ ಹಾಗೂ ಸಿಎ ಸುಧೀಶ್ ರೈ ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಎಮ್ಮಿಗನೂರು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

 

ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡು ಅಪಘಾತದ ನಿಖರ ಕಾರಣದ ಕುರಿತು ತನಿಖೆ ಮುಂದುವರಿಸಿದ್ದಾರೆ.