22 July 2026 |

ಮ್ಯಾಟ್ರಿಮೋನಿ(Matrimonial) ಆ್ಯಪ್‌ ಮೂಲಕ ಪರಿಚಯ; ಬೆಳ್ತಂಗಡಿ ಉದ್ಯಮಿಗೆ ₹87.22 ಲಕ್ಷ ವಂಚನೆ

  • 21 Jul 2026 07:04:51 PM

ಬೆಳ್ತಂಗಡಿ: ಮ್ಯಾಟ್ರಿಮೋನಿ (ವೈವಾಹಿಕ) ಆ್ಯಪ್‌ ಮೂಲಕ ಪರಿಚಯವಾದ ಮಹಿಳೆಯೊಬ್ಬರು ಮದುವೆಯ ಭರವಸೆ ಹಾಗೂ ವಿವಿಧ ಕಾರಣಗಳನ್ನು ನೀಡಿ ಬೆಳ್ತಂಗಡಿಯ ಉದ್ಯಮಿಯೊಬ್ಬರಿಂದ ₹87.22 ಲಕ್ಷ ಪಡೆದು ವಂಚಿಸಿರುವ ಪ್ರಕರಣ ಬೆಳಕಿಗೆ ಬಂದಿದೆ.

 

ದೂರಿನ ಪ್ರಕಾರ, 2024ರ ಮೇ ತಿಂಗಳಲ್ಲಿ ಉದ್ಯಮಿಗೆ ಮ್ಯಾಟ್ರಿಮೋನಿ ಆ್ಯಪ್‌ನಲ್ಲಿ 35 ವರ್ಷದ ಮಹಿಳೆಯೊಂದಿಗೆ ಪರಿಚಯವಾಗಿತ್ತು. ಬಳಿಕ ಇಬ್ಬರ ನಡುವೆ ದೂರವಾಣಿ ಮೂಲಕ ನಿರಂತರ ಸಂಪರ್ಕ ಬೆಳೆದು, ಮಹಿಳೆ ಉದ್ಯಮಿಯ ವಿಶ್ವಾಸ ಗಳಿಸಿದ್ದರು ಎನ್ನಲಾಗಿದೆ.

 

2024ರ ಸೆಪ್ಟೆಂಬರ್ 26ರಿಂದ 2025ರ ಜನವರಿ 20ರವರೆಗೆ ವಿವಿಧ ಅಗತ್ಯಗಳ ನೆಪದಲ್ಲಿ ಹಣದ ಅವಶ್ಯಕತೆ ಇದೆ ಎಂದು ಹೇಳಿ, ಬಳಿಕ ಮರಳಿಸುವುದಾಗಿ ಭರವಸೆ ನೀಡಿ, ಉದ್ಯಮಿಯಿಂದ ವಿವಿಧ ಬ್ಯಾಂಕ್ ಖಾತೆಗಳಿಗೆ ಒಟ್ಟು ₹87,22,710 ವರ್ಗಾಯಿಸಿಕೊಂಡಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

 

ಕೆಲವು ದಿನಗಳ ಬಳಿಕ ಮಹಿಳೆ ಕರೆಗಳು ಹಾಗೂ ಸಂದೇಶಗಳಿಗೆ ಪ್ರತಿಕ್ರಿಯೆ ನೀಡುವುದನ್ನು ನಿಲ್ಲಿಸಿದ್ದು, ಹಣವನ್ನು ಹಿಂತಿರುಗಿಸದೇ ಸಂಪರ್ಕ ಕಡಿತಗೊಳಿಸಿದ್ದಾರೆ. ಇದರಿಂದ ತಾನು ವಂಚನೆಗೆ ಒಳಗಾಗಿರುವುದು ತಿಳಿದ ಉದ್ಯಮಿ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

 

ದೂರಿನ ಆಧಾರದಲ್ಲಿ ಬೆಳ್ತಂಗಡಿ ಪೊಲೀಸರು ವಂಚನೆ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದು, ಹಣ ವರ್ಗಾವಣೆಯಾದ ಬ್ಯಾಂಕ್ ಖಾತೆಗಳು ಹಾಗೂ ಇತರೆ ಡಿಜಿಟಲ್ ಸಾಕ್ಷ್ಯಗಳನ್ನು ಪರಿಶೀಲಿಸುತ್ತಿದ್ದಾರೆ.