22 July 2026 |

ಮನೆ ಕಾಮಗಾರಿಗೆ ಬಂದ ಕಾರ್ಮಿಕನಿಂದ ₹6.37 ಲಕ್ಷ ಮೌಲ್ಯದ ಚಿನ್ನಾಭರಣ ಕಳವು; 24 ಗಂಟೆಯಲ್ಲಿ ಆರೋಪಿಯ ಬಂಧನ

  • 21 Jul 2026 08:26:43 PM

ಮಂಗಳೂರು: ಮನೆ ದುರಸ್ತಿ ಕಾಮಗಾರಿಗೆ ಬಂದಿದ್ದ ಕಾರ್ಮಿಕನೊಬ್ಬ ಮನೆ ಮಾಲೀಕರ ಚಿನ್ನಾಭರಣ ಹಾಗೂ ವಾಚ್ ಕಳವು ಮಾಡಿದ ಪ್ರಕರಣವನ್ನು ಮಂಗಳೂರು ಗ್ರಾಮಾಂತರ ಪೊಲೀಸರು ಕೇವಲ 24 ಗಂಟೆಗಳಲ್ಲೇ ಭೇದಿಸಿ ಆರೋಪಿಯನ್ನು ಬಂಧಿಸಿದ್ದಾರೆ.

 

ಮಂಗಳೂರಿನ ಮೇರಿಹಿಲ್‌ನ ಬಾಂದೋಟ್ಟು ಪ್ರದೇಶದ ನಿವಾಸವೊಂದರಲ್ಲಿ ಛಾವಣಿ ಬದಲಾವಣೆ ಮತ್ತು ಫಾಲ್ಸ್ ಸೀಲಿಂಗ್ ಕಾಮಗಾರಿ ನಡೆಯುತ್ತಿದ್ದ ವೇಳೆ ಈ ಕಳವು ನಡೆದಿತ್ತು. ಮನೆಯ ಟೇಬಲ್ ಡ್ರಾಯರ್‌ನಲ್ಲಿ ಇರಿಸಲಾಗಿದ್ದ ಸುಮಾರು 49 ಗ್ರಾಂ ತೂಕದ ಚಿನ್ನಾಭರಣ ಹಾಗೂ ಸೊನಾಟಾ ಕಂಪನಿಯ ಗೋಲ್ಡ್ ಕೋಟೆಡ್ ಕೈಗಡಿಯಾರವನ್ನು ಆರೋಪಿಯು ಕಳವು ಮಾಡಿದ್ದಾನೆ ಎಂದು ತನಿಖೆಯಿಂದ ತಿಳಿದುಬಂದಿದೆ.

 

ಕಳವಾದ ವಸ್ತುಗಳಲ್ಲಿ 20 ಗ್ರಾಂ ಚಿನ್ನದ ಕಡಗ, 17 ಗ್ರಾಂ ಚಿನ್ನದ ಸರ ಹಾಗೂ 8 ಗ್ರಾಂ ಮತ್ತು 4 ಗ್ರಾಂ ತೂಕದ ಎರಡು ಉಂಗುರಗಳು ಸೇರಿದ್ದು, ಒಟ್ಟು ಸುಮಾರು ₹6.37 ಲಕ್ಷ ಮೌಲ್ಯದ ಆಸ್ತಿ ಕಳವಾಗಿತ್ತು.

 

ಈ ಕುರಿತು ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಭಾರತೀಯ ನ್ಯಾಯ ಸಂಹಿತೆ (BNS) ಕಲಂ 305ರಡಿ ಪ್ರಕರಣ ದಾಖಲಾಗಿತ್ತು. ತನಿಖೆ ವೇಳೆ ಕಾಮಗಾರಿಯಲ್ಲಿ ತೊಡಗಿದ್ದ ಕಾರ್ಮಿಕರನ್ನು ವಿಚಾರಣೆಗೆ ಒಳಪಡಿಸಿದಾಗ, ಉತ್ತರ ಪ್ರದೇಶ ಮೂಲದ ಹಾಗೂ ಪ್ರಸ್ತುತ ಮಂಗಳೂರಿನ ಬಂದರು ಪ್ರದೇಶದಲ್ಲಿ ವಾಸವಾಗಿದ್ದ ಜಹೀರುದ್ದೀನ್ (24) ಕಳವು ನಡೆಸಿರುವುದನ್ನು ಒಪ್ಪಿಕೊಂಡಿದ್ದಾನೆ.

 

ಬಂಧಿತ ಆರೋಪಿಯಿಂದ ಕಳವಾಗಿದ್ದ ಚಿನ್ನಾಭರಣ ಮತ್ತು ವಾಚ್ ಅನ್ನು ಪೊಲೀಸರು ವಶಪಡಿಸಿಕೊಂಡಿದ್ದು, ಬಳಿಕ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ನ್ಯಾಯಾಲಯ ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.

 

ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಡಿ.ಆರ್. ಮಂಜಪ್ಪ, ಸಬ್ ಇನ್ಸ್‌ಪೆಕ್ಟರ್ ಅರುಣ್ ಕುಮಾರ್ ಡಿ. ಹಾಗೂ ಸಿಬ್ಬಂದಿಯ ತಂಡ ಕ್ಷಿಪ್ರ ಕಾರ್ಯಾಚರಣೆ ನಡೆಸಿ ಪ್ರಕರಣವನ್ನು 24 ಗಂಟೆಗಳೊಳಗೆ ಭೇದಿಸಿದೆ ಎಂದು ಪೊಲೀಸ್ ಆಯುಕ್ತರ ಕಚೇರಿ ಪ್ರಕಟಣೆಯಲ್ಲಿ ತಿಳಿಸಲಾಗಿದೆ.