06 August 2026 |

ಕಾಲುಸಂಕದಿಂದ ಜಾರಿ ಹೊಳೆಗೆ ಬಿದ್ದ ಯುವತಿ ರಕ್ಷಣೆ; ಸೇತುವೆ ಕೊರತೆಗೆ ಸ್ಥಳೀಯರ ಆಕ್ರೋಶ

  • 22 Jul 2026 09:53:13 AM

ಉಪ್ಪಳ: ಸಮರ್ಪಕ ಸೇತುವೆಯಿಲ್ಲದ ಕಾರಣ ಸಂಭವಿಸಿದ ಅಪಘಾತದಲ್ಲಿ ಹೊಳೆಗೆ ಬಿದ್ದ ಯುವತಿಯನ್ನು ಸ್ಥಳೀಯ ನಿವಾಸಿಯೊಬ್ಬರು ಸಾಹಸದಿಂದ ರಕ್ಷಿಸಿದ ಘಟನೆ ಸೋಮವಾರ ಮೀಂಜ ಸಮೀಪದ ದೇರಂಬಳದಲ್ಲಿ ನಡೆದಿದೆ.

 

ಪುತ್ತೂರಿನಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದ ತನ್ನ ಸಹೋದರಿಯನ್ನು ಕರೆದುಕೊಂಡು ಮನೆಗೆ ಮರಳುತ್ತಿದ್ದ ಯುವತಿ, ಅಡಿಕೆ ಮರದ ದಿಂಡಿನಿಂದ ನಿರ್ಮಿಸಲಾಗಿದ್ದ ತಾತ್ಕಾಲಿಕ ಕಾಲುಸಂಕದ ಮೂಲಕ ಹೊಳೆ ದಾಟುವ ವೇಳೆ ಕಾಲು ಜಾರಿ ನೀರಿಗೆ ಬಿದ್ದಿದ್ದಾರೆ. ಇದನ್ನು ಕಂಡ ಸಹೋದರಿ ಜೋರಾಗಿ ಸಹಾಯಕ್ಕಾಗಿ ಕೂಗಿಕೊಂಡಿದ್ದಾರೆ.

 

ಸಹೋದರಿಯ ಕಿರುಚಾಟ ಕೇಳಿ ಸ್ಥಳಕ್ಕೆ ಧಾವಿಸಿದ ಉದಯ ಕುಮಾರ್‌ ಶೆಟ್ಟಿ ಅವರು, ನೀರಿನಿಂದ ತುಂಬಿ ಹರಿಯುತ್ತಿದ್ದ ಹೊಳೆಗೆ ಹಾರಿ ಯುವತಿಯನ್ನು ಸುರಕ್ಷಿತವಾಗಿ ಹೊರತೆಗೆದಿದ್ದಾರೆ. ಆದರೆ ಯುವತಿಯ ಬಳಿ ಇದ್ದ ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿ ಅಂಕಪಟ್ಟಿಗಳು, ಟ್ಯಾಬ್ ಮತ್ತು ಮೊಬೈಲ್ ಫೋನ್ ನೀರಿನ ಪ್ರವಾಹದಲ್ಲಿ ಕೊಚ್ಚಿ ಹೋಗಿವೆ.

 

ಈ ಪ್ರದೇಶದಲ್ಲಿದ್ದ ಹಳೆಯ ಸೇತುವೆಯ ಒಂದು ಭಾಗ ಈಗಾಗಲೇ ಕುಸಿದಿರುವ ಹಿನ್ನೆಲೆಯಲ್ಲಿ ಸ್ಥಳೀಯರು ಅಡಿಕೆ ಮರ ಬಳಸಿ ತಾತ್ಕಾಲಿಕ ಕಾಲುಸಂಕ ನಿರ್ಮಿಸಿಕೊಂಡು ಸಂಚಾರ ನಡೆಸುತ್ತಿದ್ದಾರೆ. ಹಲವು ವರ್ಷಗಳಿಂದ ಈ ಭಾಗಕ್ಕೆ ಶಾಶ್ವತ ಮತ್ತು ಸುಸಜ್ಜಿತ ಸೇತುವೆ ನಿರ್ಮಿಸುವಂತೆ ಸಾರ್ವಜನಿಕರು ಆಗ್ರಹಿಸುತ್ತಿದ್ದರೂ, ಸಂಬಂಧಪಟ್ಟ ಅಧಿಕಾರಿಗಳು ಇನ್ನೂ ಕ್ರಮ ಕೈಗೊಂಡಿಲ್ಲ ಎಂದು ಸ್ಥಳೀಯರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.