06 August 2026 |

4 ವರ್ಷದ ಬಾಲಕಿಯ ಕಣ್ಣಿನಿಂದ ಜೀವಂತ ಹುಳು ಹೊರತೆಗೆದ ವೈದ್ಯರು; ಮಣಿಪಾಲ ಕೆಎಂಸಿಯಲ್ಲಿ ಯಶಸ್ವಿ ಶಸ್ತ್ರಚಿಕಿತ್ಸೆ

  • 22 Jul 2026 10:16:18 AM

ಮಣಿಪಾಲ: ಕೇವಲ ನಾಲ್ಕು ವರ್ಷದ ಬಾಲಕಿಯ ಬಲ ಕಣ್ಣಿನಲ್ಲಿ ನಿರಂತರ ಕೆಂಪಾಗುವುದು ಮತ್ತು ಕಿರಿಕಿರಿ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಪೋಷಕರು ಆಕೆಯನ್ನು ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆಗೆ ಕರೆತಂದಿದ್ದರು.

 

ಪರಿಶೀಲನೆ ವೇಳೆ ಕಣ್ಣಿನ ಒಳಭಾಗದಲ್ಲಿ ಜೀವಂತ ಪರಾವಲಂಬಿ (ಹುಳು) ಇರುವ ಶಂಕೆ ವ್ಯಕ್ತವಾದ ಹಿನ್ನೆಲೆ, ನೇತ್ರ ವಿಭಾಗದ ಮುಖ್ಯಸ್ಥ ಡಾ. ಯೋಗೀಶ್ ಎಸ್. ಕಾಮತ್ ನೇತೃತ್ವದ ವೈದ್ಯರ ತಂಡ ಸಾಮಾನ್ಯ ಅನಸ್ಥೀಷಿಯಾದಡಿ ಶಸ್ತ್ರಚಿಕಿತ್ಸೆ ನಡೆಸಿ, ಬಾಲಕಿಯ ಕಣ್ಣಿನಿಂದ ಜೀವಂತ ಹುಳನ್ನು ಯಶಸ್ವಿಯಾಗಿ ಹೊರತೆಗೆದಿದೆ. ಚಿಕಿತ್ಸೆ ಬಳಿಕ ಬಾಲಕಿ ಸಂಪೂರ್ಣವಾಗಿ ಚೇತರಿಸಿಕೊಂಡಿದ್ದಾಳೆ.

 

ವೈದ್ಯರ ಪ್ರಕಾರ, ಇದು ಡೈರೋಫಿಲೇರಿಯಾಸಿಸ್ (Dirofilariasis) ಎಂಬ ಅಪರೂಪದ ಸೋಂಕು. ಸೋಂಕಿತ ಸೊಳ್ಳೆಗಳ ಕಚ್ಚುವಿಕೆಯಿಂದ ಇದು ಹರಡುತ್ತದೆ. ಸಾಮಾನ್ಯವಾಗಿ ನಾಯಿಗಳು ಹಾಗೂ ಇತರ ಪ್ರಾಣಿಗಳಲ್ಲಿ ಕಂಡುಬರುವ ಈ ಪರಾವಲಂಬಿ, ಕೆಲವೊಮ್ಮೆ ಮನುಷ್ಯರ ಕಣ್ಣಿನ ಸುತ್ತಲೂ ಬೆಳೆಯುವ ಸಾಧ್ಯತೆಯಿದೆ.

 

ಸೊಳ್ಳೆಗಳ ನಿಯಂತ್ರಣ, ಸ್ವಚ್ಛತೆ ಹಾಗೂ ಸಾಕುಪ್ರಾಣಿಗಳಿಗೆ ನಿಯಮಿತ ಪಶುವೈದ್ಯಕೀಯ ಆರೈಕೆ ನೀಡುವುದು ಇಂತಹ ಸೋಂಕುಗಳನ್ನು ತಡೆಗಟ್ಟಲು ಅಗತ್ಯ ಎಂದು ಕೆಎಂಸಿ ವೈದ್ಯರು ತಿಳಿಸಿದ್ದಾರೆ.