06 August 2026 |

ಪದವು-ಬೊಳ್ಳನಾರ್ ರಸ್ತೆಗೆ ತಕ್ಷಣದ ದುರಸ್ತಿ ಕಾರ್ಯ: ಮಳೆ ಬಳಿಕ ₹30 ಲಕ್ಷ ವೆಚ್ಚದಲ್ಲಿ ಶಾಶ್ವತ ಅಭಿವೃದ್ಧಿಗೆ ಸಿದ್ಧತೆ

  • 22 Jul 2026 10:21:25 AM

ಬೆಳ್ತಂಗಡಿ: ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದ ಪುದುವೆಟ್ಟು ಗ್ರಾಮದ ಪದವು-ಬೊಳ್ಳನಾರ್ ಪ್ರಮುಖ ರಸ್ತೆಯ ಹದಗೆಟ್ಟ ಸ್ಥಿತಿಗೆ ಸಂಬಂಧಿಸಿದಂತೆ ಶಾಸಕ ಹರೀಶ್ ಪೂಂಜ ಅವರ ನಿರ್ದೇಶನದ ಮೇರೆಗೆ ತುರ್ತು ದುರಸ್ತಿ ಕಾರ್ಯ ಕೈಗೊಳ್ಳಲಾಗಿದೆ.

 

ಇತ್ತೀಚೆಗೆ ಸುರಿದ ಭಾರೀ ಮಳೆಯಿಂದ ರಸ್ತೆ ಹಾನಿಗೊಳಗಾಗಿ ವಾಹನ ಸವಾರರು ಹಾಗೂ ಸ್ಥಳೀಯ ನಿವಾಸಿಗಳು ಸಂಚಾರದಲ್ಲಿ ಸಾಕಷ್ಟು ತೊಂದರೆ ಅನುಭವಿಸುತ್ತಿದ್ದರು. ಈ ಕುರಿತು ಸಾರ್ವಜನಿಕರಿಂದ ಮಾಹಿತಿ ದೊರಕಿದ ಬಳಿಕ ರಸ್ತೆ ಸುಧಾರಣೆಗೆ ಸಂಬಂಧಿಸಿದಂತೆ ತಕ್ಷಣ ಕ್ರಮ ಜರುಗಿಸಲಾಗಿದೆ.

 

ಪ್ರಸ್ತುತ ರಸ್ತೆಯ ಹಾನಿಗೊಳಗಾದ ಭಾಗಗಳಲ್ಲಿ ವೆಟ್ ಮಿಕ್ಸ್ ಅಳವಡಿಸಿ ವಾಹನ ಸಂಚಾರ ಸುಗಮವಾಗುವಂತೆ ವ್ಯವಸ್ಥೆ ಮಾಡಲಾಗಿದೆ. ಜೊತೆಗೆ ಮಳೆನೀರು ರಸ್ತೆಯಲ್ಲಿ ಸಂಗ್ರಹವಾಗದಂತೆ ಚರಂಡಿ ನಿರ್ಮಾಣ ಕಾರ್ಯಕ್ಕೂ ಚಾಲನೆ ನೀಡಲಾಗಿದೆ.

 

ರಸ್ತೆಯ ಶಾಶ್ವತ ಮರುಡಾಮರೀಕರಣಕ್ಕಾಗಿ ಈಗಾಗಲೇ ₹30 ಲಕ್ಷ ಅನುದಾನ ಮಂಜೂರಾಗಿದ್ದು, ಅಗತ್ಯ ಆಡಳಿತಾತ್ಮಕ ಅನುಮೋದನೆಯೂ ಲಭ್ಯವಾಗಿದೆ. ಆದರೆ ಮಳೆಗಾಲ ಮುಂದುವರಿದಿರುವ ಕಾರಣ ಪೂರ್ಣ ಪ್ರಮಾಣದ ಕಾಮಗಾರಿ ಆರಂಭಿಸಲು ಸಾಧ್ಯವಾಗದ ಹಿನ್ನೆಲೆ ತಾತ್ಕಾಲಿಕ ದುರಸ್ತಿ ಕಾರ್ಯವನ್ನು ಕೈಗೊಳ್ಳಲಾಗಿದೆ.

 

ಮಳೆಗಾಲ ಅಂತ್ಯಗೊಂಡ ತಕ್ಷಣವೇ ಮರುಡಾಮರೀಕರಣ ಕಾಮಗಾರಿ ಆರಂಭಿಸಲಾಗುವುದು. ಉತ್ತಮ ಗುಣಮಟ್ಟದ ರಸ್ತೆ ನಿರ್ಮಾಣದ ಮೂಲಕ ಈ ಭಾಗದ ಜನರು ಹಲವು ವರ್ಷಗಳಿಂದ ಎದುರಿಸುತ್ತಿರುವ ಸಂಚಾರ ಸಮಸ್ಯೆಗೆ ಶಾಶ್ವತ ಪರಿಹಾರ ಒದಗಿಸುವ ಉದ್ದೇಶವಿದೆ ಎಂದು ತಿಳಿದುಬಂದಿದೆ.