ಮಂಗಳೂರು: ಹೊಸದಿಲ್ಲಿಯಲ್ಲಿ ಪ್ರಧಾನಿ ನಿವಾಸದ ಸಮೀಪ ಪ್ರತಿಭಟನೆ ನಡೆಸಿದ ವೇಳೆ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಹಾಗೂ ಸಂಸದೆ ಪ್ರಿಯಾಂಕಾ ಗಾಂಧಿ ಅವರನ್ನು ಪೊಲೀಸರು ವಶಕ್ಕೆ ಪಡೆದಿರುವುದನ್ನು ಖಂಡಿಸಿ ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಸಮಿತಿಯ ನೇತೃತ್ವದಲ್ಲಿ ಮಂಗಳೂರಿನ ಲಾಲ್‌ಬಾಗ್‌ನ ಮಹಾನಗರ ಪಾಲಿಕೆ ಕಚೇರಿ ಎದುರು ಪ್ರತಿಭಟನೆ ನಡೆಸಲಾಯಿತು.
ಪ್ರತಿಭಟನೆಯನ್ನು ಉದ್ದೇಶಿಸಿ ವಿಧಾನ ಪರಿಷತ್ ಸದಸ್ಯ ಐವನ್ ಡಿ’ಸೋಜಾ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕೆ. ಹರೀಶ್ ಕುಮಾರ್ ಹಾಗೂ ಕಾಂಗ್ರೆಸ್ ಮುಖಂಡ ಪದ್ಮರಾಜ್ ಆರ್. ಪೂಜಾರಿ ಮಾತನಾಡಿದರು.
ವಿದ್ಯಾರ್ಥಿಗಳ ವಿರುದ್ಧ ಪೊಲೀಸ್ ಕ್ರಮ ಹಾಗೂ ಪ್ರತಿಭಟನಾಕಾರರ ಬಂಧನವನ್ನು ಟೀಕಿಸಿದ ಅವರು, ಕೇಂದ್ರ ಸರ್ಕಾರ ಪ್ರಜಾಪ್ರಭುತ್ವದ ಮೌಲ್ಯಗಳನ್ನು ಹತ್ತಿಕ್ಕುವ ರೀತಿಯಲ್ಲಿ ನಡೆದುಕೊಳ್ಳುತ್ತಿದೆ ಎಂದು ಆರೋಪಿಸಿದರು. ಶಾಂತಿಯುತ ಪ್ರತಿಭಟನೆ ನಡೆಸಿದ ಜನಪ್ರತಿನಿಧಿಗಳನ್ನು ಬಂಧಿಸಿರುವುದು ಖಂಡನೀಯವಾಗಿದ್ದು, ಈ ಬೆಳವಣಿಗೆಗೆ ನೈತಿಕ ಹೊಣೆ ಹೊತ್ತು ಪ್ರಧಾನಿ ನರೇಂದ್ರ ಮೋದಿ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಕಾಂಗ್ರೆಸ್ ಮುಖಂಡರಾದ ಮಿಥುನ್ ರೈ, ಶಶಿಧರ್ ಹೆಗ್ಡೆ, ಪ್ರಕಾಶ್ ಸಾಲಿಯಾನ್, ಇಬ್ರಾಹೀಂ ನವಾಜ್, ಎಸ್. ಅಪ್ಪಿ, ದಿನೇಶ್ ಮುಳೂರು, ಭಾಸ್ಕರ್ ಕೆ., ಡೇನಿಸ್ ಡಿ’ಸಿಲ್ವಾ, ನವೀನ್ ಡಿ’ಸೋಜಾ, ಸೌಹಾನ್ ಆಳ್ವಾ, ವಾಹಬ್ ಕುದ್ರೋಳಿ, ಅಮೃತ್ ಕದ್ರಿ, ನಮಿತಾ ಡಿ’ರಾವ್, ನಿರಾಜ್ ಚಂದ್ರಪಾಲ್, ಸಮರ್ಥ್ ಭಟ್, ಶಾಂತಲಾ ಗಟ್ಟಿ, ಚೇತನ್ ಉರ್ವ, ಪ್ರವೀಣ್ ಆಳ್ವಾ, ಎ.ಸಿ. ವಿನಾಯರಾಜ್, ಅಶ್ರಫ್, ಅನಿಲ್ ಪೂಜಾರಿ, ವಿಕಾಸ್ ಶೆಟ್ಟಿ, ಅಲಿಸ್ಟರ್ ಡಿ’ಕುನ್ನಾ, ತೌಸೀಫ್ ಉಪ್ಪಿನಂಗಡಿ, ಸಾರಿಕಾ ಪೂಜಾರಿ, ವೀಣಾ ಸೇರಿದಂತೆ ಹಲವರು ಭಾಗವಹಿಸಿದ್ದರು.
ಪ್ರತಿಭಟನೆಯ ಬಳಿಕ ಸ್ಥಳದಲ್ಲಿದ್ದ ಪ್ರತಿಭಟನಾಕಾರರನ್ನು ಪೊಲೀಸರು ವಶಕ್ಕೆ ಪಡೆದು ಬಳಿಕ ಬಿಡುಗಡೆ ಮಾಡಿದರು.





