06 August 2026 |

ಉಡುಪಿ: ರಸ್ತೆ ಮೇಲೆ ಕುಸಿದ ಭಾರೀ ಮರ; ಅಗ್ನಿಶಾಮಕ ಸಿಬ್ಬಂದಿಯಿಂದ ತ್ವರಿತ ತೆರವು

  • 22 Jul 2026 02:16:46 PM

ಉಡುಪಿ: ಜಿಲ್ಲೆಯಲ್ಲಿ ಕಳೆದ ಮೂರು ದಿನಗಳಿಂದ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ವಿವಿಧ ಕಡೆಗಳಲ್ಲಿ ಸಮಸ್ಯೆಗಳು ಎದುರಾಗುತ್ತಿವೆ. ಇದೇ ಸಂದರ್ಭದಲ್ಲಿ ಕಲ್ಯಾಣಪುರ ಸಂತೆಕಟ್ಟೆ ಪ್ರದೇಶದಲ್ಲಿ ಭಾರೀ ಗಾತ್ರದ ಮರ ರಸ್ತೆ ಮೇಲೆ ಉರುಳಿ ಬಿದ್ದ ಪರಿಣಾಮ ವಾಹನ ಸಂಚಾರಕ್ಕೆ ಅಡಚಣೆ ಉಂಟಾಯಿತು.

 

ಅಕಸ್ಮಿಕವಾಗಿ ಮರ ಬಿದ್ದಿದ್ದರಿಂದ ಸ್ಥಳದಲ್ಲಿ ಕೆಲಕಾಲ ಗೊಂದಲದ ವಾತಾವರಣ ನಿರ್ಮಾಣವಾಯಿತು. ಉಡುಪಿಯಿಂದ ಕುಂದಾಪುರದತ್ತ ಸಾಗುವ ಸರ್ವಿಸ್ ರಸ್ತೆಯಲ್ಲಿ ವಾಹನಗಳು ಮತ್ತು ಸಾರ್ವಜನಿಕರ ಸಂಚಾರಕ್ಕೆ ತೊಂದರೆಯಾಗಿದ್ದು, ಸುಮಾರು ಒಂದು ಗಂಟೆ ಕಾಲ ಸಂಚಾರ ವ್ಯವಸ್ಥೆ ಅಸ್ತವ್ಯಸ್ತಗೊಂಡಿತ್ತು.

 

ಮಾಹಿತಿ ತಿಳಿದ ತಕ್ಷಣ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಮರವನ್ನು ತೆರವುಗೊಳಿಸಿ ರಸ್ತೆ ಸ್ವಚ್ಛಗೊಳಿಸಿದರು. ಬಳಿಕ ಸಂಚಾರವನ್ನು ಪುನಃ ಸುಗಮಗೊಳಿಸಲಾಯಿತು.