06 August 2026 |

ವಾಟ್ಸಾಪ್‌ನಲ್ಲಿ ಮದುವೆ ಆಹ್ವಾನದ ಹೆಸರಿನಲ್ಲಿ ವಂಚನೆ; APK ಫೈಲ್ ಕ್ಲಿಕ್ ಮಾಡಿದ ಅಧಿಕಾರಿಗೆ ₹9.96 ಲಕ್ಷ ನಷ್ಟ

  • 22 Jul 2026 03:50:35 PM

ಬೆಂಗಳೂರು: ವಾಟ್ಸಾಪ್‌ನಲ್ಲಿ ಮದುವೆ ಆಹ್ವಾನದ ಹೆಸರಿನಲ್ಲಿ ಬಂದ ನಕಲಿ APK ಫೈಲ್ ಕ್ಲಿಕ್ ಮಾಡಿದ ಪರಿಣಾಮ ಬೆಂಗಳೂರಿನ ಅರಣ್ಯ ಇಲಾಖೆಯ ಅಧಿಕಾರಿಯೊಬ್ಬರು ಸೈಬರ್ ವಂಚಕರ ಬಲೆಗೆ ಬಿದ್ದು ₹9.96 ಲಕ್ಷಕಳೆದುಕೊಂಡಿರುವ ಘಟನೆ ಬೆಳಕಿಗೆ ಬಂದಿದೆ.

 

ಲಭ್ಯ ಮಾಹಿತಿಯ ಪ್ರಕಾರ, ಅಧಿಕಾರಿಗೆ ವಾಟ್ಸಾಪ್ ಮೂಲಕ ಮದುವೆ ಆಹ್ವಾನದಂತೆ ಕಾಣುವ ಸಂದೇಶವೊಂದು ಬಂದಿತ್ತು. ಅದರೊಂದಿಗೆ ಕಳುಹಿಸಲಾಗಿದ್ದ APK ಫೈಲ್ ಅನ್ನು ಅವರು ತಮ್ಮ ಮೊಬೈಲ್‌ನಲ್ಲಿ ಡೌನ್‌ಲೋಡ್ ಮಾಡಿ ತೆರೆದಿದ್ದಾರೆ. ಇದಾದ ಬಳಿಕ ವಂಚಕರು ಮೊಬೈಲ್‌ಗೆ ಅನಧಿಕೃತ ಪ್ರವೇಶ ಪಡೆದು, ಬ್ಯಾಂಕ್ ಖಾತೆಯಿಂದ ಹಂತ ಹಂತವಾಗಿ ಒಟ್ಟು ₹9.96 ಲಕ್ಷ ಹಣವನ್ನು ವರ್ಗಾಯಿಸಿಕೊಂಡಿದ್ದಾರೆ ಎನ್ನಲಾಗಿದೆ.

 

ಘಟನೆಗೆ ಸಂಬಂಧಿಸಿದಂತೆ ಉತ್ತರ ಸೈಬರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ. ಇತ್ತೀಚಿನ ದಿನಗಳಲ್ಲಿ ಮದುವೆ ಆಹ್ವಾನ, ಕೊರಿಯರ್ ಮಾಹಿತಿ, ಬ್ಯಾಂಕ್ ಕೆವೈಸಿ ನವೀಕರಣ ಸೇರಿದಂತೆ ವಿವಿಧ ನೆಪಗಳಲ್ಲಿ APK ಫೈಲ್ ಕಳುಹಿಸಿ ಮೊಬೈಲ್‌ಗಳನ್ನು ಹ್ಯಾಕ್ ಮಾಡುವ ಪ್ರಕರಣಗಳು ಹೆಚ್ಚುತ್ತಿದ್ದು, ಸಾರ್ವಜನಿಕರು ಹೆಚ್ಚಿನ ಎಚ್ಚರಿಕೆ ವಹಿಸುವಂತೆ ಸೈಬರ್ ತಜ್ಞರು ಸಲಹೆ ನೀಡಿದ್ದಾರೆ.