ಬೆಂಗಳೂರು: ದೇಶದ ಐಟಿ ರಾಜಧಾನಿ ಬೆಂಗಳೂರು ಇದೀಗ ಮತ್ತೊಂದು ದಾಖಲೆಯನ್ನು ತನ್ನದಾಗಿಸಿಕೊಂಡಿದೆ. ನಗರದಲ್ಲಿ ನೋಂದಾಯಿತ ಖಾಸಗಿ ಕಾರುಗಳ ಸಂಖ್ಯೆ 25.2 ಲಕ್ಷ ದಾಟಿದ್ದು, ಈ ವಿಭಾಗದಲ್ಲಿ ದೇಶದಲ್ಲೇ ಮೊದಲ ಸ್ಥಾನಕ್ಕೇರಿದೆ. ಈ ಮೂಲಕ ಖಾಸಗಿ ಕಾರುಗಳ ಸಂಖ್ಯೆಯಲ್ಲಿ ದೆಹಲಿ ಹಾಗೂ ಮುಂಬೈ ನಗರಗಳನ್ನು ಬೆಂಗಳೂರು ಹಿಂದಿಕ್ಕಿದೆ ಎಂದು ಸಾರಿಗೆ ಇಲಾಖೆಯ ಇತ್ತೀಚಿನ ಅಂಕಿ-ಅಂಶಗಳು ತಿಳಿಸಿವೆ.
ಕಳೆದ ಐದು ವರ್ಷಗಳಲ್ಲಿ ಬೆಂಗಳೂರಿನಲ್ಲಿ ಸುಮಾರು 5 ಲಕ್ಷ ಹೊಸ ಖಾಸಗಿ ಕಾರುಗಳು ಸೇರ್ಪಡೆಯಾಗಿದ್ದು, ವರ್ಷಕ್ಕೆ ಸರಾಸರಿ 1 ಲಕ್ಷ ಕಾರುಗಳು ನೋಂದಣಿಯಾಗುತ್ತಿವೆ. 2026ರ ಜೂನ್ ತಿಂಗಳಲ್ಲೇ 13,519 ಹೊಸ ಖಾಸಗಿ ಕಾರುಗಳು ನೋಂದಣಿಯಾಗಿವೆ.
ನಗರದಲ್ಲಿ ಖಾಸಗಿ ಕಾರುಗಳ ಜೊತೆಗೆ ಸುಮಾರು 87 ಲಕ್ಷ ದ್ವಿಚಕ್ರ ವಾಹನಗಳು ಇದ್ದು, ಒಟ್ಟು ವಾಹನಗಳ ಸಂಖ್ಯೆ 1.28 ಕೋಟಿಗೆ ಏರಿದೆ. ಆದರೆ ಒಟ್ಟು ವಾಹನಗಳ ಸಂಖ್ಯೆಯಲ್ಲಿ ದೆಹಲಿ ಇನ್ನೂ ಮುಂಚೂಣಿಯಲ್ಲಿದ್ದು, ಬೆಂಗಳೂರಿನ ದಾಖಲೆ ಖಾಸಗಿ ಕಾರುಗಳ ಸಂಖ್ಯೆಗೆ ಮಾತ್ರ ಸೀಮಿತವಾಗಿದೆ ಎಂಬುದು ಗಮನಾರ್ಹ.
ವಾಹನಗಳ ಸಂಖ್ಯೆಯಲ್ಲಿ ಭಾರೀ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಟ್ರಾಫಿಕ್ ದಟ್ಟಣೆ, ಪಾರ್ಕಿಂಗ್ ಸಮಸ್ಯೆ ಹಾಗೂ ಪ್ರಯಾಣದ ಅವಧಿ ಹೆಚ್ಚಳ ಬೆಂಗಳೂರಿನ ಪ್ರಮುಖ ಸವಾಲುಗಳಾಗಿವೆ. ತಜ್ಞರ ಅಭಿಪ್ರಾಯದಂತೆ, ಈ ಸಮಸ್ಯೆಗೆ ದೀರ್ಘಕಾಲಿಕ ಪರಿಹಾರವಾಗಿ ಮೆಟ್ರೋ ಜಾಲ ವಿಸ್ತರಣೆ, ಬಿಎಂಟಿಸಿ ಬಸ್ ಸೇವೆಗಳ ಬಲವರ್ಧನೆ ಹಾಗೂ ಇತರೆ ಸಾರ್ವಜನಿಕ ಸಾರಿಗೆ ವ್ಯವಸ್ಥೆಗಳನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಅಭಿವೃದ್ಧಿಪಡಿಸುವ ಅಗತ್ಯವಿದೆ.





