23 July 2026 |

ಅಪಘಾತ ಸಂತ್ರಸ್ತರಿಗೆ ರಾಜ್ಯ ಸರ್ಕಾರದ ಭರ್ಜರಿ ನೆರವು: ಮೊದಲ 7 ದಿನ ₹2.5 ಲಕ್ಷವರೆಗೆ ಉಚಿತ ಚಿಕಿತ್ಸೆ

  • 22 Jul 2026 05:28:44 PM

ಮಂಗಳೂರು: ರಸ್ತೆ ಅಪಘಾತದಲ್ಲಿ ಗಾಯಗೊಂಡವರಿಗೆ ರಾಜ್ಯ ಸರ್ಕಾರದಿಂದ ಮಹತ್ವದ ನೆರವು ದೊರೆಯಲಿದ್ದು, ಅಪಘಾತದ ಬಳಿಕದ ಮೊದಲ ಏಳು ದಿನಗಳ ಚಿಕಿತ್ಸೆಗೆ ₹2.5 ಲಕ್ಷದವರೆಗೆ ಉಚಿತ ಚಿಕಿತ್ಸೆ ಒದಗಿಸುವ ಯೋಜನೆಯನ್ನು ಶೀಘ್ರದಲ್ಲೇ ಜಾರಿಗೆ ತರಲಾಗುವುದು ಎಂದು ಆರೋಗ್ಯ ಸಚಿವ ಯು.ಟಿ. ಖಾದರ್ ತಿಳಿಸಿದ್ದಾರೆ.

 

ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕು ಆಸ್ಪತ್ರೆಯಲ್ಲಿ ನಿರ್ಮಿಸಲಾದ ನೂತನ ಟ್ರಾಮಾ ಕೇರ್ ಕೇಂದ್ರ ಹಾಗೂ ತುರ್ತು ಚಿಕಿತ್ಸಾ ಘಟಕವನ್ನು ಉದ್ಘಾಟಿಸಿದ ಬಳಿಕ ಮಾತನಾಡಿದ ಅವರು, ರಸ್ತೆ ಅಪಘಾತದ ಸಂತ್ರಸ್ತರ ಚಿಕಿತ್ಸಾ ವೆಚ್ಚವನ್ನು ಆರಂಭಿಕ ಏಳು ದಿನಗಳವರೆಗೆ ಸರ್ಕಾರವೇ ಭರಿಸಲಿದೆ ಎಂದು ಹೇಳಿದರು.

 

ಯೋಜನೆಯಡಿ ಬಿಡುಗಡೆಯಾಗುವ ಅನುದಾನದಲ್ಲಿ ಶೇ.70ರಷ್ಟು ಮೊತ್ತವನ್ನು ಆಸ್ಪತ್ರೆಯ ಚಿಕಿತ್ಸಾ ಸೇವೆಗಳಿಗೆ ಬಳಸಲಾಗುತ್ತದೆ. ಉಳಿದ ಶೇ.30ರಷ್ಟು ಹಣವನ್ನು ವೈದ್ಯರು ಮತ್ತು ಆಸ್ಪತ್ರೆ ಸಿಬ್ಬಂದಿಗೆ ಪ್ರೋತ್ಸಾಹಧನವಾಗಿ ನೀಡಲಾಗುವುದು ಎಂದು ಸಚಿವರು ವಿವರಿಸಿದರು.

 

ಆಹಾರ ಸುರಕ್ಷತೆ ಕುರಿತು ಮಾತನಾಡಿದ ಸಚಿವರು, ಕಳಪೆ ಗುಣಮಟ್ಟದ ಆಹಾರ ಮತ್ತು ಜಂಕ್ ಫುಡ್ ನಿಯಂತ್ರಣಕ್ಕಾಗಿ ರಾಷ್ಟ್ರೀಯ ಮಟ್ಟದ ಆಹಾರ ಪರೀಕ್ಷಾ ಕೇಂದ್ರ ಸ್ಥಾಪನೆ ಅಗತ್ಯವಾಗಿದೆ ಎಂದು ಅಭಿಪ್ರಾಯಪಟ್ಟರು. ಮಕ್ಕಳ ಆರೋಗ್ಯದ ದೃಷ್ಟಿಯಿಂದ ಪೌಷ್ಟಿಕ ಆಹಾರದ ಮಹತ್ವವನ್ನು ತಾಯಂದಿರಿಗೆ ಆರಂಭಿಕ ಹಂತದಲ್ಲೇ ತಿಳಿಸಿಕೊಡುವುದು ಅವಶ್ಯಕವಾಗಿದ್ದು, ಇದರಿಂದ ಮುಂದಿನ 10 ರಿಂದ 15 ವರ್ಷಗಳಲ್ಲಿ ಆರೋಗ್ಯಕರ ಸಮಾಜ ನಿರ್ಮಾಣ ಸಾಧ್ಯವಾಗಲಿದೆ ಎಂದರು.

 

ಆಸ್ಪತ್ರೆಗಳ ಸಂಖ್ಯೆಯನ್ನು ಹೆಚ್ಚಿಸುವುದಕ್ಕಿಂತ ಜನರ ಆರೋಗ್ಯ ಮಟ್ಟವನ್ನು ಸುಧಾರಿಸಿ ಆಸ್ಪತ್ರೆಗಳ ಅವಲಂಬನೆ ಕಡಿಮೆ ಮಾಡುವುದೇ ಸರ್ಕಾರದ ಮುಖ್ಯ ಗುರಿಯಾಗಿದೆ ಎಂದು ಸಚಿವರು ಹೇಳಿದರು. ರಾಜಕೀಯ ಭಿನ್ನಾಭಿಪ್ರಾಯಗಳು ಚುನಾವಣಾ ಸಮಯಕ್ಕೆ ಸೀಮಿತವಾಗಿರಲಿ, ಆದರೆ ಅಭಿವೃದ್ಧಿ ವಿಚಾರದಲ್ಲಿ ಎಲ್ಲರೂ ಒಗ್ಗಟ್ಟಿನಿಂದ ಕಾರ್ಯನಿರ್ವಹಿಸಬೇಕು ಎಂದು ಅವರು ಕರೆ ನೀಡಿದರು.