ನವದೆಹಲಿ: ಧರ್ಮಸ್ಥಳದ ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಮರು ತನಿಖೆ ಕುರಿತು ಸುಪ್ರೀಂ ಕೋರ್ಟ್ ಮಹತ್ವದ ಬೆಳವಣಿಗೆ ದಾಖಲಿಸಿದೆ. ಪ್ರಕರಣವನ್ನು ಮರು ತನಿಖೆ ಮಾಡುವ ಅಗತ್ಯವಿದೆ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ ನ್ಯಾಯಪೀಠ, ಯಾವ ಮಾದರಿಯ ತನಿಖೆ ನಡೆಸಬೇಕು ಎಂಬುದರ ಕುರಿತು ಅಂತಿಮ ಆದೇಶವನ್ನು ಕಾಯ್ದಿರಿಸಿದೆ.
ಸೌಜನ್ಯ ಅವರ ತಾಯಿ ಕುಸುಮಾವತಿ ಗೌಡ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸಂಜಯ್ ಕುಮಾರ್ ನೇತೃತ್ವದ ಪೀಠ, ಹಿಂದಿನ ಸಿಬಿಐ ತನಿಖೆಯ ಗುಣಮಟ್ಟದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿತು. ತನಿಖಾಧಿಕಾರಿ ಘಟನಾ ಸ್ಥಳಕ್ಕೆ ಭೇಟಿ ನೀಡದಿರುವುದು ಸೇರಿದಂತೆ ಹಲವು ಲೋಪಗಳ ಬಗ್ಗೆ ಪ್ರಶ್ನೆ ಎತ್ತಿದ ಪೀಠ, 14 ವರ್ಷ ಕಳೆದರೂ ಸಮರ್ಪಕ ತನಿಖೆ ನಡೆದಿಲ್ಲ ಎಂದು ಅಭಿಪ್ರಾಯಪಟ್ಟಿತು.
ಅರ್ಜಿದಾರರು ನಿವೃತ್ತ ನ್ಯಾಯಾಧೀಶರ ಮೇಲ್ವಿಚಾರಣೆಯಲ್ಲಿ ಮರು ತನಿಖೆ ನಡೆಸುವಂತೆ ಮನವಿ ಮಾಡಿದ್ದು, ರಾಜ್ಯ ಸರ್ಕಾರ ಎಸ್‌ಐಟಿ ರಚನೆಯಾದರೆ ಸಂಪೂರ್ಣ ಸಹಕಾರ ನೀಡುವುದಾಗಿ ತಿಳಿಸಿದೆ. ಈ ಹಿನ್ನೆಲೆಯಲ್ಲಿ ಎಸ್‌ಐಟಿ ಅಥವಾ ಇತರೆ ಮಾದರಿಯ ತನಿಖೆ ಕುರಿತು ಅಂತಿಮ ತೀರ್ಮಾನವನ್ನು ನಂತರ ಪ್ರಕಟಿಸುವುದಾಗಿ ಸುಪ್ರೀಂ ಕೋರ್ಟ್ ತಿಳಿಸಿದೆ.





